ಜಿಲ್ಲೆ

ಮೆಟ್ರೋ ಟಿಕೆಟ್​ಗಳು 9 ಅಪ್ಲಿಕೇಶನ್​ಗಳಲ್ಲಿ ಲಭ್ಯ

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ಪ್ರಯಾಣಿಕರಿಗೆ ಸುಗಮ ಹಾಗೂ ತಡೆರಹಿತ ಟಿಕೆಟ್​ ಬುಕ್ಕಿಂಗ್​ ಅನುಭವವನ್ನು ಒದಗಿಸುವ ಉದ್ದೇಶದಿಂದ ನಮ್ಮ ಮೆಟ್ರೋ ಟಿಕೆಟ್​ಗಳು ಇದೀಗ 9 ಅಪ್ಲಿಕೇಶನ್​ಗಳಲ್ಲಿ "ಕ್ಯೂಆರ್​ ಟಿಕೆಟ್​' ಲಭ್ಯವಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಿಳಿಸಿದೆ.

ಡಿಜಿಟಲ್​ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಬಿಎಂಆರ್​ಸಿಎಲ್​ ಓಪನ್​ ನೆಟ್​ವರ್ಕ್​ ಫಾರ್​ ಡಿಜಿಟಲ್​ ಕಾಮರ್ಸ್​ (ಒಎನ್​ಡಿಸಿ) ಮೂಲಕ ಕ್ಯೂಆರ್​ ಟಿಕೆಟ್​ ಸೇವೆ ನೀಡಲು ಪ್ರಾರಂಭಿಸಿದೆ.

ಈಸ್​ ಮೈ ಟ್ರಿಪ್​, ಹೈವೇ ಡಿಲೈಟ್​, ಮೈಲ್ಸ್​ ಆ್ಯಂಡ್​ ಕಿಲೋಮೀಟರ್ಸ್​, ನಮ್ಮ ಯಾತ್ರಿ, ವನ್​ ಟಿಕೆಟ್​, ರ್ಯಾಪಿಡೋ, ರೆಡ್​ಬಸ್​, ಟಮ್ಮಾಕ್​ ಮತ್ತು ಯಾತ್ರಿ&ಸಿಟಿ ಟ್ರಾವೆಲ್​ ಗೈಡ್​ ಎಂಬ ಅಪ್ಲಿಕೇಶನ್​ಗಳ ಮೂಲಕ ಪ್ರಯಾಣಿಕರು ಕ್ಯೂಆರ್​ ಟಿಕೆಟ್​ಗಳನ್ನು ಖರೀದಿಸಬಹುದಾಗಿದೆ.

ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್​ ಬುಕ್ಕಿಂಗ್​ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್​ ಆ್ಯಪ್​, ಬಿಎಂಆರ್​ಸಿಎಲ್​ ವಾಟ್ಸ್​ಆಪ್​ ಚಾಟ್​ ಮತ್ತು ಪೇಟಿಎಂ ಆ್ಯಪ್​ಗೆ ಪೂರಕವಾಗಿದ್ದು, ಡಿಜಿಟಲ್​ ಬಳಕೆದಾರರಿಗೆ ಇನ್ನಷ್ಟು ಸುಲಭವಾಗಲಿದೆ.

ಡಿಜಿಟಲ್​ ಟಿಕೆಟ್​ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕದವರೆಗೆ ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ. ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಶನ್​ನಿಂದ ತಮ್ಮ ಮನೆಯಿಂದ ಗಮ್ಯಸ್ಥಳದವರೆಗೆ ತಮ್ಮ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದ್ದು, ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. > ಎಂ.ಮಹೇಶ್ವರ ರಾವ್​, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್​ಸಿಎಲ್​