ಜಿಲ್ಲೆ

ಮೆಟ್ರೋ 3ನೇ ಹಂತಕ್ಕೆ ಶ್ರೀ ಟೆಂಡರ್​

ಪವನ್ ಆಚಾರ್ಯ ನೀರ್ಚಾಲು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಆ.10ರಂದು ಚಾಲನೆ ದೊರಕಿದರೂ, ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಎಂದು ಯೋಜನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ 3ನೇ ಹಂತದ ಕಾಮಗಾರಿಗಳ ಸಿವಿಲ್​ ಟೆಂಡರ್​ ಅನ್ನು ವರ್ಷಾಂತ್ಯದೊಳಗೆ ಕರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್​) ಸಿದ್ಧತೆ ನಡೆಸುತ್ತಿದೆ.

ಮೂರನೇ ಹಂತದ ವಿಸ್ತರಣೆಯ ಭಾಗವಾದ ಆರೆಂಜ್​ ಲೈನ್​ನಲ್ಲಿ ಎರಡು ಮಾರ್ಗಗಳಿದ್ದು, ಜೆ.ಪಿ.ನಗರ 4ನೇ ಹಂತದಿಂದ ಕೇಂಪಾಪುರದವರೆಗೆ (32.1 ಕಿ.ಮೀ.) ಹಾಗೂ ಹೊಸಹಳ್ಳಿ&ಕಡಬಗೆರೆಯವರೆಗೆ (12.5 ಕಿ.ಮೀ.) ಒಟ್ಟಾರೆಯಾಗಿ ಇದು 44.6 ಕಿ.ಮೀ. ಉದ್ದದ ಮಾರ್ಗವಾಗಲಿದೆ. ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿರುವ ಈ ಹಂತಕ್ಕೆ ಇದೀಗ ಚುರುಕಿನ ಚಾಲನೆ ಸಿಗುವ ಸಾಧ್ಯತೆ ಇದೆ. ಈ ತಿಂಗಳ ಕೊನೇ ಅಥವಾ ನವೆಂಬರ್​ ಮೊದಲ ವಾರದಲ್ಲಿ ಸಿವಿಲ್​ ಕಾಮಗಾರಿಗಳ ಟೆಂಡರ್​ ಆಹ್ವಾನಿಸಲಿದೆ ಎಂದು ಬಿಎಂಆರ್​ಸಿಎಲ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು 8&9 ಟೆಂಡರ್​ ಪ್ಯಾಕೇಜ್​ಗಳ ಮೂಲಕ ಯೋಜನೆ ಪ್ರಾರಂಭವಾಗುವ ಸಾಧ್ಯತೆ ಇದ್ದು, ಇದರಲ್ಲಿ ನಿಲ್ದಾಣ, ಟ್ರ್ಯಾಕ್​ ಹಾಗೂ ಡಿಪೋ ಕಾಮಗಾರಿಗಳು ಒಳಗೊಂಡಿವೆ. ಡಬಲ್​ ಡೆಕ್ಕರ್​ ನಿರ್ಮಾಣವೂ ಈ ಯೋಜನೆಯ ಭಾಗವಾಗಿರುವುದರಿಂದ ಟೆಂಡರ್​ಗಳನ್ನು ಅದರ ಪ್ರಕಾರ ವಿಭಜಿಸಲಾಗುತ್ತದೆ. ಅಂತಿಮ ಟೆಂಡರ್​ಗೆ 2&3 ತಿಂಗಳು ಬೇಕು ಎಂದು ತಿಳಿಸಿದ್ದಾರೆ.

ಟೆಂಡರ್​ ಪ್ರಕ್ರಿಯೆಯ ವಿಳಂಬಕ್ಕೆ ಮುಖ್ಯ ಕಾರಣ ರಾಜ್ಯ ಸರ್ಕಾರದ ಡಬಲ್​ ಡೆಕ್ಕರ್​ ಯೋಜನೆಯಾಗಿದೆ. ಸೆಪ್ಟೆಂಬರ್​ನಲ್ಲಿ ರಾಜ್ಯ ಸಚಿವ ಸಂಪುಟವು 37.12 ಕಿ.ಮೀ. ಉದ್ದದ ಡಬಲ್​ ಡೆಕ್ಕರ್​ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇದರಲ್ಲಿ 3ನೇ ಹಂತದ ಕಾಮಗಾರಿ ಸೇರಿ ಮುಂದಿನ ಎಲ್ಲ ಮೆಟ್ರೋ ಯೋಜನೆಯೂ ಡೆಬಲ್​ ಡೆಕ್ಕರ್​ ಮಾದರಿಯಲ್ಲೇ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ.

ಜೈಕಾ ನೆರವು: ಯೋಜನೆಯ ಮುಖ್ಯ ಹಣಕಾಸು ಜಪಾನ್​ ಇಂಟರ್​ನ್ಯಾಷನಲ್​ ಕೋ&ಆಪರೇಶನ್​ ಏಜೆನ್ಸಿ (ಜೈಕಾ)ಯಿಂದ ಬರಲಿದೆ. "ಪರಿಸರ ಪರಿಣಾಮ ಮೌಲ್ಯಮಾಪನ ಹಾಗೂ ಸಾಮಾಜಿಕ ಪರಿಣಾಮ ಮೌಲ್ಯಮಾಪನ ವರದಿಗಳನ್ನು ಜೈಕಾ ಅಂತಿಮಗೊಳಿಸಿ ಅಂಗೀಕರಿಸಿದೆ. ಜೈಕಾದಿಂದ ಹಣಕಾಸು ಪಡೆಯುವ ಪ್ಯಾಕೇಜ್​ಗಳ ಟೆಂಡರ್​ಗಳನ್ನು ಬಿಎಂಆರ್​ಸಿಎಲ್​ ಡಿಸೆಂಬರ್​ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ಸರ್ಕಾರ ಮತ್ತು ಜೈಕಾ ನಡುವಿನ ಸಾಲ ಒಪ್ಪಂದಗಳು 2026ರ ಮಾರ್ಚ್​ ವೇಳೆಗೆ ಸಹಿಯಾಗುವ ನಿರೀಕ್ಷೆ ಇದೆ. ಹೊಸ ಮಾರ್ಗಗಳಿಗೆ ಅಗತ್ಯವಿರುವ ರೈಲುಗಳ ಖರೀದಿಗೂ ಈ ಸಂಸ್ಥೆಯಿಂದ ಸಹಾಯ ಸಿಗಲಿದೆ.

ಮೆಟ್ರೋದಲ್ಲೂ ಇಲ್ಲ ಜನ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನಗರಾದ್ಯಂತ ಜನ ಇಲ್ಲದೆ ಬಿಕೋ ಎನ್ನುತ್ತಿತ್ತು. ನಮ್ಮ ಮೆಟ್ರೋದಲ್ಲೂ ರೈಡರ್​ಶಿಪ್​ ಶೇ,20&30 ಕಡಿಮೆಯಾಗಿದ್ದು, ಮೆಟ್ರೋದಲ್ಲಿ ಪೀಕ್​ ಅವರ್​ನಲ್ಲೂ ಸಾಮಾನ್ಯ ರಶ್​ ಕಂಡು ಬಂದಿಲ್ಲ. ಹಬ್ಬದ ನಿಮಿತ್ತ ಈ ವಾರ ರಜಾ ದಿನ ಇದ್ದುದರಿಂದ ಐಟಿ&ಬಿಟಿ ಉದ್ಯೋಗಿಗಳು, ವಲಸೆ ಕಾರ್ಮಿಕರು ಎಲ್ಲ ತಮ್ಮ ಸ್ವಂತ ಊರುಗಳಿಗೆ ತೆರಳಿದುದರಿಂದ ನಗರಾದ್ಯಂತ ಜನಸಂಖ್ಯೆ ಕಡಿಮೆಯಾಗಿತ್ತು.