ಜಿಲ್ಲೆ

ನಮ್ಮ ಮೆಟ್ರೋ 2ನೇ ಹಂತದಲ್ಲಿ ಮಾರ್ಚ್​ನಿಂದ ಸುರಂಗ ಕಾಮಗಾರಿ

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗಸಂದ್ರದವರೆಗಿನ 14 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಮಾರ್ಚ್​ನಲ್ಲಿ ಚಾಲನೆ ದೊರೆಯಲಿದೆ. ಚೀನಾದಿಂದ ಸುರಂಗ ಕೊರೆಯುವ 4 ಯಂತ್ರಗಳು ಫೆಬ್ರವರಿ ಮೊದಲ ವಾರದಲ್ಲಿ ನಗರವನ್ನು ತಲುಪಲಿವೆ. ತಕ್ಷಣವೇ ಅವುಗಳ ಜೋಡಣೆ ಕಾರ್ಯ ಆರಂಭವಾಗಲಿದ್ದು, ಮಾರ್ಚ್​ನಲ್ಲಿ ಕಾಮಗಾರಿ ಆರಂಭವಾಗಲಿದೆ.

ನಗರದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಬಲ್ಲ ಮೆಟ್ರೋ ರೈಲು ಯೋಜನೆಯ 2ನೇ ಹಂತದ ಕಾಮಗಾರಿ 2024ಕ್ಕೆ ಪೂರ್ಣಗೊಳ್ಳಲಿದೆ. ಯೋಜನೆಗೆ 1,771.25 ಕೋಟಿ ರೂ. ಅಂದಾಜು ವೆಚ್ಚ ನಿಗದಿಯಾಗಿದೆ.

ಯಂತ್ರಗಳಿಗೆ ನಾಮಕರಣ: ಚೀನಾದಿಂದ ತರಲಾಗುತ್ತಿರುವ ನಾಲ್ಕು ಸುರಂಗ ಕೊರೆಯುವ ಯಂತ್ರಗಳಿಗೆ ಸಂಸ್ಕೃತದ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಅದರಂತೆ ಅವನಿ (ಭೂಮಿ), ಊರ್ಜಾ (ಶಕ್ತಿ), ಲವಿ (ಸಿಂಹ) ಮತ್ತು ವಿಂಧ್ಯಾ (ಜ್ಞಾನ) ಎಂದು ಅವುಗಳಿಗೆ ನಾಮಕರಣ ಮಾಡಲಾಗಿದೆ. ಇವುಗಳಲ್ಲಿ ಮೊದಲಿಗೆ ಅವನಿ ಮತ್ತು ಊರ್ಜಾ ಯಂತ್ರಗಳು ಬೆಂಗಳೂರು ತಲುಪಲಿವೆ.

ಯಂತ್ರಗಳನ್ನು ತಂದ ನಂತರ ಸುರಂಗ ಕೊರೆಯಲು ನೆಲದಡಿ ಇಳಿಸಲು ಶಿವಾಜಿನಗರ ಮತ್ತು ದಂಡು ರೈಲ್ವೆ ನಿಲ್ದಾಣದ ಬಳಿ ಈಗಾಗಲೆ ಶಾಫ್ಟ್ (ವೃತ್ತಾಕಾರದ ಗುಂಡಿ) ನಿರ್ವಿುಸಲಾಗುತ್ತಿದೆ. ಸುರಂಗ ಕೊರೆಯಲು ಆರಂಭಿಸುವ ಯಂತ್ರಗಳು ದಿನಕ್ಕೆ 3ರಿಂದ 5 ಮೀಟರ್​ವರೆಗೆ ಸುರಂಗ ಕೊರೆಯಲಿವೆ.

14 ಕಿಮೀ ಉದ್ದದ ಮಾರ್ಗ ನಿರ್ಮಾಣ

ಮೆಟ್ರೋ 2ನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗಸಂದ್ರವರೆಗಿನ 14 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ವಿುಸಲಾಗುತ್ತದೆ. ಮೊದಲಿಗೆ ವೆಲ್ಲಾರ ಜಂಕ್ಷನ್​ನಿಂದ ಶಿವಾಜಿನಗರದವರೆಗೆ 2.7 ಕಿ.ಮೀ. ಉದ್ದದ ಮಾರ್ಗ ನಿರ್ವಿುಸಲಾಗುತ್ತದೆ. ಜತೆಗೆ ಶಿವಾಜಿ ನಗರದಿಂದ ಪಾಟರಿ ಟೌನ್​ವರೆಗಿನ 2.8 ಕಿ.ಮೀ. ಸುರಂಗ ಮಾರ್ಗ ನಿರ್ವಿುಸಲು ಯೋಜನೆ ರೂಪಿಸಲಾಗಿದೆ.

2ನೇ ಹಂತದ 32 ನಿಲ್ದಾಣಗಳಲ್ಲಿ ಅಗತ್ಯ ಕೇಬಲ್​ಗಳ ಅಳವಡಿಕೆ

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಈಗಾಗಲೆ ಪೂರ್ಣಗೊಂಡಿರುವ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮ, ಇಂಜಿನಿಯರಿಂಗ್ ಮತ್ತು ಮೆಕಾನಿಕಲ್ ವ್ಯವಸ್ಥೆಯನ್ನು ಅಳವಡಿಸಲು ಬಿಎಂಆರ್​ಸಿಎಲ್ ಕ್ರಮ ಕೈಗೊಳ್ಳುತ್ತಿದೆ. ನಮ್ಮ ಮೆಟ್ರೋ 2ನೇ ಹಂತದಲ್ಲಿ ಈಗಾಗಲೆ ಬಹುತೇಕ ಪೂರ್ಣಗೊಂಡಿರುವ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯಗಳ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ರೀಚ್-1 ವಿಸ್ತರಣಾ ಮಾರ್ಗವಾದ ಬೈಯಪನಹಳ್ಳಿ-ವೈಟ್​ಫೀಲ್ಡ್ ಮತ್ತು ರೀಚ್ 3 ವಿಸ್ತರಣಾ ಮಾರ್ಗ ನಾಗಸಂದ್ರದಿಂದ ಗೊಟ್ಟಿಗೆರೆ ಹಾಗೂ ಆರ್.ವಿ.ರಸ್ತೆಯಿಂದ

ಸಿಲ್ಕ್​ಬೋರ್ಡ್ ಮಾರ್ಗದಲ್ಲಿನ ನಿಲ್ದಾಣಗಳ ಕಾಮಗಾರಿ ಶೇ. 60 ಪೂರ್ಣಗೊಂಡಿದೆ. ಹೀಗಾಗಿ ಆ ನಿಲ್ದಾಣಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ, ಡಿ.ಜಿ. ಸೆಟ್, ಯುಪಿಎಸ್, ವಿದ್ಯುತ್ ಸಂಪರ್ಕಕ್ಕೆ ಬೇಕಾಗುವ ವಿವಿಧ ಕೇಬಲ್​ಗಳ ಅಳವಡಿಕೆಗೆ ಗುತ್ತಿಗೆದಾರರನ್ನು ನೇಮಿಸಲಾಗುತ್ತಿದೆ. ಒಟ್ಟು 32 ನಿಲ್ದಾಣಗಳಲ್ಲಿ ಈ ಕಾಮಗಾರಿ ನಡೆಯಲಿದೆ.

ವಿಮಾನ ನಿಲ್ದಾಣದವರೆಗೆ ಮೆಟ್ರೋ ಮಾರ್ಗ

ಬೆಂಗಳೂರು: ನಗರದ ಜನತೆ ಬಹುದಿನಗಳಿಂದ ಎದುರು ನೋಡುತ್ತಿದ್ದ ಕೆಂಪೇಗೌಡ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ನಿರ್ವಿುಸಲು ಬಿಎಂಆರ್​ಇಸಿಎಲ್ ಕೊನೆಗೂ ತೀರ್ವನಿಸಿದೆ.

ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ ಮಾರ್ಗದ ಎರಡನೇ ಹಂತದ 2 ಬಿ ಮಾರ್ಗದ ನೀಲಿನಕ್ಷೆ ತಯಾರಿಸಲಾಗಿದೆ. ಅತಿ ಹೆಚ್ಚಾಗಿ ವಾಹನ ದಟ್ಟಣೆ ಕಂಡುಬರುವ ಮಾರ್ಗವಾದ ಹೆಬ್ಬಾಳದ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಒಟ್ಟು 36.5 ಕಿಮೀ ಉದ್ದದ ಮಾರ್ಗದಲ್ಲಿ 17 ಮೆಟ್ರೋ ನಿಲ್ದಾಣಗಳನ್ನು ನಿರ್ವಿುಸಲಾಗುವುದು. ಒಂದನೇ ಹಂತದಲ್ಲಿ ನಿರ್ವಿುಸಲಾಗಿರುವ ಪಿಂಕ್​ಲೈನ್​ಗೆ ಹೊಸದಾಗಿ ನಿರ್ವಣವಾಗುತ್ತಿರುವ 2ನೇ ಹಂತದ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಕೆ.ಆರ್. ಪುರ, ಕಸ್ತೂರಿ ನಗರ, ಚನ್ನಸಂದ್ರ, ಹೊರಮಾವು, ಬಾಬುಸಾಬ್ ಪಾಳ್ಯ, ಕಲ್ಯಾಣ ನಗರ, ಎಚ್​ಬಿಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು, ಕೋಗಿಲೆ ಕ್ರಾಸ್, ಪೆರಿಫೆರಲ್ ರಿಂಗ್ ರೋಡ್​ನಲ್ಲಿ ತಲಾ ಒಂದು ನಿಲ್ದಾಣ ನಿರ್ವಿುಸಲಾಗುತ್ತಿದೆ. ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ 3 ನಿಲ್ದಾಣಗಳನ್ನು ನಿರ್ವಿುಸಲಾಗುತ್ತದೆ. ಶೀಘ್ರ್ರಲ್ಲಿಯೇ ಕಾಮಗಾರಿಗೆ ಚಾಲನೆ ಸಿಗುವ ನಿರೀಕ್ಷೆ ಇದೆ.