ಬೆಂಗಳೂರು: ಕಾಳೇನ ಅಗ್ರಹಾರದಿಂದ ನಾಗವಾರ ತನಕ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಬಹುನಿರೀತ ಯೋಜನೆಯ ಭಾಗವಾದ ಗುಲಾಬಿ ಮಾರ್ಗ 2026ರ ಮೇನಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದ್ದು, 3ಎ ಹಂತದ ಕೆಲಸಗಳು ದಿನದಿನಕ್ಕೆ ಚುರುಕಾಗುತ್ತಿದೆ.
ಈ ಯೋಜನೆಗೆ ಭಾರತ್ ಅರ್ಥ್ ಮೂವರ್ಸ್ ನಿಯಮಿತ (ಬಿಇಎಂಎಲ್) ಸಂಸ್ಥೆ ಜತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಒಪ್ಪಂದ ಮಾಡಿಕೊಂಡಿದೆ. ಆ ಪ್ರಕಾರ, 2026ರ ಮಾರ್ಚ್ ವೇಳೆಗೆ ಚಾಲಕರಹಿತ ರೈಲು ಸೆಟ್ಗಳನ್ನು ತಯಾರಿಸಿ ನೀಡಬೇಕಿದೆ. ಇದರಿಂದ 7 ತಿಂಗಳೊಳಗಾಗಿ ಪಿಂಕ್ಲೈನ್ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾಗುವ ನಿರೀೆ ಇದೆ.
ವಿಳಂಬ ಇಲ್ಲ: ನಗರದ ಇತರ ಮೆಟ್ರೋ ಮಾರ್ಗಗಳ ಅಭಿವೃದ್ಧಿಯಲ್ಲಿ ವಿಳಂಬ ಕಂಡುಬಂದು, ಪ್ರಯಾಣಿಕರನ್ನು ನಿರಾಶೆಗೊಳಿಸಿತ್ತು. ಆದರೆ ಗುಲಾಬಿ ಮಾರ್ಗದ ಕಾಮಗಾರಿಗಳು ತ್ವರಿತದಲ್ಲಿ ನಡೆಯುತ್ತಿದೆ. ಪಿಂಕ್ಲೈನ್ ಕಾಳೇನಅಗ್ರಹಾರ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್ ರಸ್ತೆ) ನಡುವಿನ 2.5 ಕಿಮೀ ಎತ್ತರದ ಮತ್ತು 13.76 ಕಿಮೀ ಭೂಗತ ಮಾರ್ಗವನ್ನು ಒಳಗೊಂಡಿದೆ. ಇದು ನಗರದ ಅತ್ಯಂತ ಸಂಕೀರ್ಣ ಮೆಟ್ರೋ ಯೋಜನೆಗಳಲ್ಲಿ ಒಂದಾಗಿದೆ.
ಸುಲಭ ಸಂಪರ್ಕ: ಗುಲಾಬಿ ಮಾರ್ಗ ನೇರಳೆ, ಹಳದಿ ಹಾಗೂ ನೀಲಿ ಮಾರ್ಗಗಳೊಂದಿಗೆ ಇಂಟರ್ಚೇಂಜ್ಗಳನ್ನು ಹೊಂದಿರುವುದರಿಂದ ಯಾವುದೇ ಕೊನೆಯ ನಿಲ್ದಾಣದಿಂದ ಬೇರೆ ಮಾರ್ಗಕ್ಕೆ ಸ್ಥಳಾಂತರ ಸುಲಭವಾಗಲಿದೆ. ಈ ಯೋಜನೆ ಪೂರ್ಣಗೊಂಡರೆ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ದಕ್ಷಿಣ ಬೆಂಗಳೂರು ಭಾಗದ ಬಡಾವಣೆಗಳಿಂದ ನಗರದ ಕೇಂದ್ರ ವ್ಯಾಪಾರ ಮತ್ತು ಉದ್ಯೋಗ ವಲಯಗಳಿಗೆ ನೇರ ಸಂಪರ್ಕ ಸಿಗಲಿದೆ.
ಎತ್ತರಿಸಿದ ಮಾರ್ಗಗಳು ಯಾವುವು?
* ಕಾಳೇನಅಗ್ರಹಾರ
* ಹುಳಿಮಾವು
* ಐಐಎಂ- ಬೆಂಗಳೂರು
* ಜೆ.ಪಿ. ನಗರ 4ನೇ ಹಂತ
* ಜಯದೇವ ಆಸ್ಪತ್ರೆ
* ತಾವರೆಕೆರೆ