ಜಿಲ್ಲೆ

ಕೆಲ ಮೆಟ್ರೋ ನಿಲ್ದಾಣಗಳಲಿಲ್ಲ ಪಾರ್ಕಿಂಗ್​ ವ್ಯವಸ್ಥೆ

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ನಮ್ಮ ಮೆಟ್ರೋದ ನೂತನ ಹಳದಿ ಮಾರ್ಗ ಆರ್​.ವಿ. ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್​ ಬೊಮ್ಮಸಂದ್ರ ವರೆಗೆ ಸಂಪರ್ಕ ಕಲ್ಪಿಸುವ ಮೂಲಕ ಐಟಿ ಸಿಬ್ಬಂದಿಗೆ ಉಪಯುಕ್ತವಾಗಿದ್ದು, ಇಲ್ಲಿನ ಕೆಲವೊಂದು ಮೆಟ್ರೋ ಸ್ಟೇಷನ್​ಗಳಲ್ಲಿ ವಾಹನಗಳನ್ನು ಪಾರ್ಕಿಂಗ್​ ಮಾಡಲು ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ಚಲ್ಲಘಟ್ಟದಿಂದ ವೈಟ್​ಫೀಲ್ಡ್​ವರೆಗೆ ಸಂಪರ್ಕ ಕಲ್ಪಿಸುವ ನೇರಳೆ ಮಾರ್ಗದಲ್ಲಿ ಟಿಕೆಟ್​ ಕೊಡಲು ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತು ಕೊಳ್ಳುವ ಪರಿಸ್ಥಿತಿ ಇದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ದಿನದಿನಕ್ಕೆ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದ್ದು, ಸಮಸ್ಯೆಗಳೂ ಉಲ್ಬಣಿಸುತ್ತಿದೆ.

ಕೆಲ ನಿಲ್ದಾಣಗಳಲ್ಲಿ ಲಿಫ್ಟ್​, ಎಸ್ಕಲೇಟರ್​ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಲೇಜಿಗೆ ಹೋಗಲು ತಡವಾಗುತ್ತಿದೆ. ಕ್ಲಾಸ್​ಗಳು ತಪ್ಪಿಹೋಗುತ್ತಿವೆ. ಬಿಎಂಆರ್​ಸಿಎಲ್​ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಪರ್ಯಾಯ ಮಾರ್ಗಗಳನ್ನು ಬಳಸುವುದೊಂದೇ ದಾರಿ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

18 ನಿಲ್ದಾಣಗಳಲ್ಲಿ ಸಮಸ್ಯೆ

ಹಳದಿ ಮಾರ್ಗದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು, 11 ನಿಲ್ದಾಣಗಳಲ್ಲಿ ಮಾತ್ರ ಪಾರ್ಕಿಂಗ್​ ವ್ಯವಸ್ಥೆ ಇದೆ. ಉಳಿದಂತೆ 5 ನಿಲ್ದಾಣದಲ್ಲಿ ಇಲ್ಲ. ನಗರದಲ್ಲಿ ಒಟ್ಟಾರೆ 83 ಮೆಟ್ರೋ ನಿಲ್ದಾಣಗಳಿದ್ದು, ಅವುಗಳಲ್ಲಿ 18 ನಿಲ್ದಾಣಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಇಲ್ಲ. ಮೆಟ್ರೋದ ಎಲ್ಲ ನಿಲ್ದಾಣಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡಿಕೊಡಲು ಪ್ರಯಾಣಿಕರು ಬಿಎಂಆರ್​ಸಿಎಲ್​ಗೆ ಆಗ್ರಹಿಸಿದ್ದಾರೆ.