ಬೆಂಗಳೂರು: ನಿರಂತರ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ಕೂಡಲೇ ರಾಜ್ಯ ಸರ್ಕಾರ ಏರಿಕೆ ಮಾಡಿರುವ ಮೆಟ್ರೋ ರೈಲು ಪ್ರಯಾಣ ದರ ಕಡಿಮೆ ಮಾಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ(metro fares are not reduced, CM's house will be laid siege; JDS alert).
ಈ ಬಗ್ಗೆ ನಗರ ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ(Ramesh Gowda) ನೇತೃತ್ವದಲ್ಲಿ ಬೆಂಗಳೂರು ಮೆಟ್ರೋ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಶಾಂತಿನಗರದಲ್ಲಿರುವ ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಗೌಡ, ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲ ಕಾಮಗಾರಿಗಳು ಅಮೇವೇಗದಲ್ಲಿ ನಡೆಯುತ್ತಿವೆ. ಎರಡು ವರ್ಷಗಳಿಂದ ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ. ಸರ್ಕಾರದಲ್ಲಿ ಹಣ ಇಲ್ಲ. ಮೆಟ್ರೋ ಪ್ರಯಾಣ ದರ ಏರಿಕೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಮಧ್ಯಮ, ಬಡ ವರ್ಗದವರಿಗೆ ಸಮಸ್ಯೆಯಾಗಿದೆ. ಶೇ.100 ದರ ಏರಿಕೆ ಮಾಡಲಾಗಿದೆ. ಸರ್ಕಾರಕ್ಕೆ ಸಾರ್ವಜನಿಕರ ಬಗ್ಗೆ ಕಾಳಜಿ ಇದ್ದರೆ ಕಡಿಮೆ ಮಾಡಲಿ. ಪೆಟ್ರೋಲ್, ಡಿಸೇಲ್ ಪ್ರತಿಯೊಂದರ ದರ ಏರಿಕೆಯಾಗಿದೆ. ಶೇ.100 ದರ ಹೆಚ್ಚಳ ಮಾಡಿದರೆ ಜನರು ಹೇಗೆ ಬದುಕಬೇಕು? ಪ್ರಯಾಣ ದರ ದುಬಾರಿ ಆಗಿರುವುದರಿಂದ ಜನರು ಮೆಟ್ರೋದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಏರಿಕೆ ಮಾಡಿರುವ ದರವನ್ನು ಹಿಂಪಡೆಯಬೇಕು. ಈ ಹಿಂದೆ ಚೆನ್ನೈನಲ್ಲಿ ಇದೇ ರೀತಿ ದರ ಏರಿಕೆ ಮಾಡಿದ್ದರು. ಜನಾಕ್ರೋಶದ ಬೆನ್ನಲ್ಲೇ ಕಡಿಮೆ ಮಾಡಿದ್ದರು. ರಾಜ್ಯ ಸರ್ಕಾರ ದರ ಕಡಿಮೆ ಮಾಡದೇ ಇದ್ದರೆ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲಾಗುವುದು. ಇಲ್ಲದಿದ್ದರೆ ಸಿಎಂ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏಕಾಏಕಿ ಎರಡರಷ್ಟು ಹೆಚ್ಚಳ ಮಾಡಿ ಪ್ರಯಾಣಿಕರನ್ನು ಸಂಕಷಕ್ಕೆ ಸಿಲುಕಿಸಿರುವುದನ್ನು ಖಂಡಿಸಿ ಬಿ.ಎಂ.ಆರ್.ಸಿ.ಎಲ್. ವಿರುದ್ಧ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಶುಕ್ರವಾರ ಪ್ರತಿಭಟನೆ ನಡೆಸಲಿದೆ.
ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.