ಜಿಲ್ಲೆ

ಮೀಟರ್ ಬಡ್ಡಿ ದಂಧೆಕೋರನ ಬಂಧನ, ಸಾಲ ನೀಡಿ ಜಮೀನು ಕ್ರಯಕ್ಕೆ ಒತ್ತಡ ಆರೋಪ

Bengaluru Rural

ನೆಲಮಂಗಲ: ಮೀಟರ್ ಬಡ್ಡಿ ದಂಧೆ ಆರೋಪದಡಿ ಯಲಚಗೆರೆ ನಿವಾಸಿ ಉದ್ಯಮಿ ಗಂಗೇಗೌಡ (55) ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ನಗರದ ವಿಶ್ವೇಶ್ವರಪುರದಲ್ಲಿ ಹಾರ್ಡ್‌ವೇರ್ ಅಂಗಡಿ ಇಟ್ಟುಕೊಂಡಿದ್ದ ಮಹದೇವ್‌ಪ್ರಸಾದ್ ಎಂಬಾತ ಗಂಗೇಗೌಡ ಬಳಿ ಜಮೀನಿನ ದಾಖಲೆ ಪತ್ರ ಅಡಮಾನವಿಟ್ಟು ಹಣ ಪಡೆದುಕೊಂಡಿದ್ದರು. ಕರೊನಾದಿಂದಾಗಿ ವ್ಯಾಪಾರ ನಡೆಯದೇ ಬಡ್ಡಿ ಕೊಡಲು ಸಾಧ್ಯವಾಗಿರಲಿಲ್ಲ. ಕೆಲ ತಿಂಗಳ ಬಳಿಕ ಸಾಲ ನೀಡಿದ್ದ ಹಣಕ್ಕಾಗಿ ಅಡವಿಟ್ಟುಕೊಂಡಿದ್ದ ಜಮೀನನ್ನು ಕಡಿಮೆ ಹಣಕ್ಕೆ ಕ್ರಯ ಮಾಡಿಕೊಡುವಂತೆ ಒತ್ತಾಯ ಮಾಡಿದ್ದಲ್ಲದೆ ಮರ್ಯಾದೆ ಹರಾಜು ಹಾಕುವುದಾಗಿ ಆರೋಪಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಮಹದೇವ್‌ಪ್ರಸಾದ್ ದೂರು ನೀಡಿದ್ದರು ಎಂದು ತಿಳಿಸಿದರು.

ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲೂ ಮೀಟರ್ ಬಡ್ಡಿ ದಂಧೆ ಮಾಡುತ್ತಿರುವುದಾಗಿ ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಆರೋಪಿ ಹೇಳಿಕೆ ನೀಡಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ. ಆರೋಪಿಯಿಂದ ನೋವು ಅನುಭವಿಸಿದವರು ನೆಲಮಂಗಲ ಡಿವೈಎಸ್‌ಪಿ ಅಥವಾ ಇನ್‌ಸ್ಪೆಕ್ಟರ್ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ರವಿ.ಡಿ ಚನ್ನಣ್ಣನವರ್ ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್ ಎ.ವಿ.ಕುಮಾರ್, ಎಸ್‌ಐ ಸುರೇಶ್ ಮತ್ತಿತರರು ಇದ್ದರು.

ಪೊಲೀಸ್ ಅಧಿಕಾರಿಗಳ ದಾಳಿ: ಯಲಚಗೆರೆ ನಿವಾಸಿಯಾದ್ದ ಗಂಗೇಗೌಡ ಕಳೆದ ನಾಲ್ಕೈದು ವರ್ಷಗಳ ಹಿಂದೆ ನಗರದ ಪರಮಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ದೂರಿನ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಡಿವೈಎಸ್‌ಪಿ ಎಚ್.ಸಿ.ಜಗದೀಶ್ ನೇತೃತ್ವದ ಅಧಿಕಾರಿಗಳು ಗಂಗೇಗೌಡ ಅವರ ಮನೆ ಸೇರಿ ಯಲಚಗೆರೆ ಗ್ರಾಮದ ತಂದೆ ಜಯರಾಮ್, ಆಪ್ತ ಕೆ.ವಿ.ಕುಮಾರ್ ಅವರ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ಮಾಡಿದ್ದರು.

ದಾಳಿಯ ವೇಳೆ ಅಡವಿರಿಸಿಕೊಂಡಿದ್ದ ಹಲವರ ಜಮೀನು ದಾಖಲೆ ಪತ್ರಗಳು, ಚೆಕ್‌ಬುಕ್, 5 ಲಕ್ಷ ನಗದು, ಚಿನ್ನ ಬೆಳ್ಳಿ ಆಭರಣ ಸೇರಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡಿದ್ದ 12 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.