ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ ಸಂವಿಧಾನದ ಪೀಠಿಕೆಯ ಬೃಹತ್ ಲೋಹದ ಪ್ರತಿಯನ್ನು ಸಂವಿಧಾನ ಪುಸ್ತಕ ರೀತಿಯಲ್ಲಿ ನಿರ್ಮಿಸಲಾಗಿದ್ದು, ಈ ಪೀಠಿಕೆಯನ್ನು ನಗರದ ರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಡಾ. ಬಿ.ಆರ್.ಅಂಬೇಡ್ಕರ ಜಯಂತಿ ಅಂಗವಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಒಂದೂವರೆ ಟನ್ ತೂಕವುಳ್ಳ ಲೋಹದ ಈ ಪೀಠಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸುಮಾರು ೧೦ ಅಡಿ ಎತ್ತರ ಮತ್ತು ೧೨ ಅಡಿ ಅಗಲ ಅಂದಾಜು ೧೩೦೦ ರಿಂದ ೧೫೦೦ ಕೆಜಿ ತೂಕದೊಂದಿಗೆ, ಶಿಲ್ಪವು ಅನುಪಾತದ ಸೌಂದರ್ಯ ಮತ್ತು ರಚನಾತ್ಮಕ ಸಮತೋಲನವನ್ನು ಕಾಯ್ದುಕೊಂಡಿದೆ ಎಂದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿದರು. ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಡಾ. ಗೋಪಾಲ ಬ್ಯಾಕೋಡ, ಗೀತಾ ಸಿ.ಡಿ., ಡಿ.ಎಚ್. ಹೂಗಾರ, ರಾಜಶೇಖರ ಕಮತಿ, ಇತರರು ಇದ್ದರು.