ಜಿಲ್ಲೆ

ಸ್ಕೌಟ್ಸ್-ಗೈಡ್ಸ್‌ಗಿಲ್ಲ ಅಗತ್ಯ ಬೆಂಬಲ : ಪಿ.ಜಿ.ಆರ್.ಸಿಂಧಿಯಾ ಅಸಮಾಧಾನ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಘಟಕ ಹಲವು ವರ್ಷಗಳಿಂದ ನೀಡುತ್ತಿರುವ ನಿಸ್ವಾರ್ಥ ಸೇವೆಗೆ ರಾಷ್ಟ್ರೀಯ ಪ್ರಧಾನ ಕಚೇರಿಯಿಂದ ಅಗತ್ಯ ಬೆಂಬಲ ಹಾಗೂ ಮೆಚ್ಚುಗೆ ಸಿಗುತ್ತಿಲ್ಲ ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧಿಯಾ ಹೇಳಿದರು.

ಮೂಡುಬಿದಿರೆ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕನ್ನಡ ಭವನದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿ, ಕರ್ನಾಟಕ ರಾಜ್ಯ ಘಟಕ, ದ.ಕ. ಘಟಕ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಭಾನುವಾರ ರಾಷ್ಟ್ರಮಟ್ಟದ ಮೆಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್ 2023 ಹಾಗೂ ರಾಷ್ಟ್ರಪತಿ ಪುರಸ್ಕಾರ -2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಕಚೇರಿ ಅಧಿಕಾರಿಗಳ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿ ನಿರ್ಲಕ್ಷೃದ ನಡುವೆ ತಮ್ಮ ಸೇವೆ ಹೇಗೆ ಮುಂದುವರಿಸಬೇಕು ಅಥವಾ ಸಹೋದ್ಯೋಗಿಗಳನ್ನು ಹೇಗೆ ಪ್ರೇರೇಪಿಸಬೇಕು ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭ

ದೇಶಾದ್ಯಂತ ರಾಷ್ಟ್ರಪತಿ ಪ್ರಶಸ್ತಿಗೆ(2016) ಆಯ್ಕೆಯಾದ 48 ಜನರಲ್ಲ್ಲಿ 30 ಮಂದಿ ಹಾಗೂ ಮೆಸೆಂಜರ್ ಆಫ್ ಪೀಸ್ ಸ್ಟಾರ್ ಪ್ರಶಸ್ತಿಗೆ(2023) ಆಯ್ಕೆಯಾದ 48 ಜನರಲ್ಲಿ 21 ಜನರು ಪ್ರಶಸ್ತಿ ಸ್ವೀಕರಿಸಿದರು.

ಅಂತಾರಾಷ್ಟ್ರೀಯ ಆಯುಕ್ತ (ಸ್ಕೌಟ್ಸ್) ಮಧುಸೂದನ ಅವಲ ಮಾತನಾಡಿದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನವದೆಹಲಿಯ ಮಾಜಿ ನಿರ್ದೇಶಕ ಕೃಷ್ಣಸ್ವಾಮಿ, ಪ್ರಭಾಕರ ಭಟ್, ಅನಲೆಂದ್ರ ಶರ್ಮಾ, ಶ್ರೀನಿವಾಸ್ ಕಿಣಿ, ಹಲವರು ಉಪಸ್ಥಿತರಿದ್ದರು. ರೋವರ್ ಲೀಡರ್ ಅಭಿನೇಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರಪತಿ ಪ್ರಶಸ್ತಿ ಪರೀಕ್ಷೆ ರದ್ದತಿ ಖಂಡನೆ

ಕೆಲವು ವರ್ಷಗಳಿಂದ ರಾಷ್ಟ್ರಪತಿ ಪ್ರಶಸ್ತಿ ಪರೀಕ್ಷೆ ನಡೆಯದಿರುವುದನ್ನು ಖಂಡಿಸಿ, ಈ ಪ್ರಶಸ್ತಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್‌ನಂತಹ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನ ನೀಡುತ್ತಿತ್ತು. ಅದರಿಂದಾಗಿ ಕರ್ನಾಟಕ ರಾಜ್ಯಕ್ಕೆ ಹೆಚ್ಚು ನಷ್ಟವಾಗಿದೆ ಎಂದು ವಿಷಾದಿಸಿದರು. ಸ್ಕೌಟಿಂಗ್‌ಗಿಂತ ಉತ್ತಮ ಸಿದ್ಧಾಂತ ಮತ್ತೊಂದಿಲ್ಲ. ವೇದ, ಪುರಾಣ ಮತ್ತು ಸನಾತನ ಧರ್ಮದ ಸಾರವೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸೇವಾ ಸಿದ್ಧಾಂತ ಎಂದು ಸಿಂಧಿಯಾ ಅಭಿಪ್ರಾಯಪಟ್ಟರು. ಸ್ಕೌಟ್ಸ್ ಹಾಗೂ ಗೈಡ್ಸ್ ನಾಯಕನಾದವನು ಯಾವುದನ್ನಾದರೂ ಸಾಧಿಸಬಹುದು, ಆದರೆ ಎಲ್ಲರೂ ಸ್ಕೌಟ್ಸ್ ಹಾಗೂ ಗೈಡ್ಸ್ ನಾಯಕನಾಗಲು ಸಾಧ್ಯವಿಲ್ಲ. ಅನುಭವವೇ ನಮ್ಮ ಶಿಕ್ಷಕ. ಸ್ಕೌಟ್ಸ್ ಹಾಗೂ ಗೈಡ್ಸ್ ವಿನಮ್ರತೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ವಿಶ್ವಾಸಾರ್ಹತೆಯ ಗುಣಗಳಿಂದ ವಿಶಿಷ್ಟತೆ ಪಡೆಯಲು ಸಾಧ್ಯ. ಮಧುಸೂದನ ಅವಲ ಅಂತಾರಾಷ್ಟ್ರೀಯ ಆಯುಕ್ತ(ಸ್ಕೌಟ್ಸ್)