ಉಳ್ಳಾಲ: ಇತರ ಜಿಲ್ಲೆ, ರಾಜ್ಯದವರು ಯಾವುದೇ ಭಾಗದಲ್ಲೂ ಬಂಡವಾಳ ಹಾಕುವ ಸಂದರ್ಭ ವಿದ್ಯುತ್ ವ್ಯವಸ್ಥೆ ಬಗ್ಗೆ ಯೋಚಿಸುತ್ತಾರೆ, ಈ ನಿಟ್ಟಿನಲ್ಲಿ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ 30 ವರ್ಷಗಳ ದೂರದೃಷ್ಟಿಯ ಯೋಜನೆ ತರಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಮೆಸ್ಕಾಂ ವತಿಯಿಂದ 9 ಕೋಟಿ ವೆಚ್ಚದಲ್ಲಿ ಕೋಟೆಕಾರ್ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 33ಕೆವಿ 8 ಯವಿಎ ಸಾಮರ್ಥ್ಯದ ಉಪಕೇಂದ್ರ ಮಂಗಳವಾರ ಪರೀಕ್ಷಾರ್ಥ ಚಾಲನೆ ನೀಡಿ ಮಾತನಾಡಿದರು.
ಮಂಗಳೂರು ಮೆಸ್ಕಾಂ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್., ನಿರ್ದೇಶಕ ಕೆ.ಎಂ.ಮಹಾದೇವ ಸ್ವಾಮಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಕೋಟೆಕಾರ್ ಪಪಂ ಅಧ್ಯಕ್ಷ ದಿವ್ಯಾ ಎಸ್.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷೆ ರವಿಶಂಕರ್, ಮೆಸ್ಕಾಂ ಆರ್ಥಿಕ ಅಧಿಕಾರಿ ಹರಿಶ್ಚಂದ್ರ ಬೋರ್ಕರ್, ಮುಖ್ಯ ಅಭಿಯಂತರ ರವಿಕಾಂತ್ ಕಾಮತ್, ಆಡಳಿತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಉಮೇಶ್, ಅಧೀಕ್ಷಕ ಅಭಿಯಂತರ ಕೃಷ್ಣರಾಜ ಕೆ.ಉಪಸ್ಥಿತರಿದ್ದರು.
ಮುಂದಕ್ಕೆ ಉಳ್ಳಾಲ ನಗರ, ಕೋಟೆಕಾರ್, ಕೊಣಾಜೆ, ಬೆಲ್ಮ, ಬೋಳಿಯಾರ್, ಕಿನ್ಯದಲ್ಲಿ ಸೆಕ್ಷನ್ ಕಚೇರಿ ನಿರ್ಮಾಣದ ಜತೆಗೆ ವಿದ್ಯುತ್ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಆಗಲಿದೆ. ಇದರಿಂದಾಗಿ ಉಳ್ಳಾಲ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.ಪ್ರಸ್ತುತ ಕಿನ್ಯಾ, ತಲಪಾಡಿ ಮತ್ತು ಮಾಡೂರು ಪ್ರದೇಶಗಳಿಗೆ 110ಕೆವಿ ವಿದ್ಯುತ್ ಕೊಣಾಜೆ ಉಪಕೇಂದ್ರದಿಂದ ಮತ್ತು ಕೋಟೆಕಾರ್, ಸೋಮೇಶ್ವರ ಪುದೇಶಗಳಿಗೆ 33 ಕೆವಿ ವಿದ್ಯುತ್ ತೊಕೊಟ್ಟು ಉಪಕೇಂದ್ರದಿಂದ ಸರಬರಾಜು ಮಾಡಲಾಗುತ್ತಿದೆ. ಉಪಕೇಂದ್ರಗಳ ಮತ್ತು ವಿದ್ಯುತ್ ಮಾರ್ಗಗಳ ಓವರ್‌ಲೋಡ್ ನಿಂದಾಗಿ ಕೆಲವು ಸಂದರ್ಭ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ಕೋಟೆಕಾರ್ ಉಪ ಕೇಂದ್ರ ಕಾರ್ಯಾರಂಭಗೊಂಡರೆ ಕಿನ್ಯಾ, ತಲಪಾಡಿ, ಕೋಟೆಕಾರ್ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ. ಸ್ಥಳೀಯ ಭಾಗದಲ್ಲಿ ವಿದ್ಯುತ್ ಓವರ್‌ಲೋಡ್ ಆಗಿ ಸರಬರಾಜಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು, ನೂತನ ಉಪಕೇಂದ್ರದಿಂದ ನಿರಂತರ ಗುಣಮಟ್ಟದ ವಿದ್ಯುತ್ ಸರಬರಾಜು ಸಾಧ್ಯ. ತಾಂತ್ರಿಕ ಸಮಸ್ಯೆ ಎದುರಾದರೆ ತಕ್ಷಣ ದುರಸ್ತಿ ಸಾಧ್ಯವಾಗಲಿದೆ. ಜಯಕುಮಾರ್ ಆರ್., ವ್ಯವಸ್ಥಾಪಕ ನಿರ್ದೇಶಕ, ಮಂಗಳೂರು ಮೆಸ್ಕಾಂ ಕಚೇರಿ https://www.vijayavani.net/ragalap-program https://www.vijayavani.net/injustice-to-backward-class-community-by-congress-government