ವಿಜಯವಾಣಿ ಸುದ್ದಿಜಾಲ ಮೂಲ್ಕಿ
ದೂರವಾಣಿ ಕರೆಗೆ ಉತ್ತರಿಸದ ಸಿಬ್ಬಂದಿ, ದೂರು ನೀಡಿದರೂ ಮರ ಕಡಿದಿಲ್ಲ, ಚರಂಡಿಯಲ್ಲಿ ಹಾಕಿರುವ ವಿದ್ಯುತ್ ಕಂಬ ತೆರವುಗೊಳಿಸಬೇಕು, ರಸ್ತೆಯಲ್ಲಿ ವಿದ್ಯುತ್ ಕಂಬಗಳು ವಾಲಿಕೊಂಡು ಅಪಾಯದ ಸ್ಥಿತಿ, ಟ್ರಾನ್ಸ್‌ಫಾರ್ಮರ್‌ನಲ್ಲಿ ಆಗಾಗ್ಗೆ ವಿದ್ಯುತ್ ಕಿಡಿ, ಹುಡ್ಕೋ ಕಾಲೋನಿಯಲ್ಲಿ ಅಪಾಯಕಾರಿ ಮರ, ಗದ್ದೆಗಳಲ್ಲಿ ಜೋತುಬಿದ್ದ ವಿದ್ಯುತ್ ತಂತಿ, ಅಪಾಯದ ಸ್ಥಿತಿಯಲ್ಲಿ ವಿದ್ಯುತ್ ಕಂಬಗಳು, ಕೆರೆಕಾಡು ಬಳಿಯ ಅನೇಕ ಮನೆಗಳಲ್ಲಿ ಲೋವೋಲ್ಟೇಜ್... ಇವು ಬುಧವಾರ ಮೂಲ್ಕಿ ಕಾರ್ನಾಡು ಮೆಸ್ಕಾಂ ಕಚೇರಿಯಲ್ಲಿ ಮೆಸ್ಕಾಂ ವತಿಯಿಂದ ಆಯೋಜಿಸಲಾದ ಮೂಲ್ಕಿ ವಿಭಾಗದ ವಿದ್ಯುತ್ ಗ್ರಾಹಕರ ಕುಂದು-ಕೊರತೆ ಸಭೆಯಲ್ಲಿ ಸಲ್ಲಿಸಲ್ಪಟ್ಟ ಗ್ರಾಹಕರ ಅಹವಾಲುಗಳು.
ಸಭೆಯಲ್ಲಿ ತಾಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್ ಮಾತನಾಡಿ, ಮೂಲ್ಕಿ ಮೆಸ್ಕಾಂ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ಕಡಿತವಾಗುತ್ತಿದ್ದು ಮೆಸ್ಕಾಂ ಕಚೇರಿಗೆ ದೂರವಾಣಿ ಮಾಡಿದರೆ ಯಾವುದೇ ಉತ್ತರ ದೊರೆಯುತ್ತಿಲ್ಲ. ಚಿತ್ರಾಪು ಗಜನಿ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬಗಳು ವಾಲಿಕೊಂಡು ಅಪಾಯದ ಸ್ಥಿತಿಯಲ್ಲಿದ್ದು ಅನೇಕ ಬಾರಿ ಇಲಾಖೆಗೆ ದೂರು ನೀಡಿದರೂ ಸರಿಪಡಿಸಿಲ್ಲ ಎಂದು ದೂರಿದರು. ಇದಕ್ಕೆ ಅಶೋಕ್ ಚಿತ್ರಾಪು ಸಹಿತ ಹಲವರು ಧ್ವನಿಗೂಡಿಸಿ ಕೂಡಲೇ ಸರಿಪಡಿಸಲು ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳು ಉತ್ತರಿಸಿ ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡಿದರು.
ಅಬ್ದುಲ್ ರಜಾಕ್ ಮಾತನಾಡಿ, ಮೂಲ್ಕಿ ವಿಜಯಸನ್ನಿಧಿ ಬಳಿಯ ಹಾಗೂ ಲಲಿತ್ ಮಹಲ್ ಬಳಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಆಗಾಗ್ಗೆ ವಿದ್ಯುತ್ ಕಿಡಿ ಸಿಡಿಯುತ್ತಿದ್ದು ಈ ಸಂದರ್ಭ ವಿದ್ಯುತ್ ಏರಿಳಿತ ಗೊತ್ತಾಗುತ್ತದೆ. ಪರಿಸರದ ಮನೆಗಳಲ್ಲಿ ಅನೇಕ ವಿದ್ಯುತ್ ಉಪಕರಣಗಳು ಹಾನಿಯಾಗಿವೆ. ದೂರು ನೀಡಿದರೆ ಯಾವುದೇ ಸ್ಪಂದನೆ ಇಲ್ಲ. ಮೆಸ್ಕಾಂನಲ್ಲಿ ಲೈನ್‌ಮನ್ ಕೊರತೆ ಇದೆ. ಸರ್ಕಾರದಿಂದ ನೇಮಕ ಮಾಡಿ ಎಂದರು. ಮುಂದಿನ ಒಂದು ತಿಂಗಳ ಒಳಗೆ ನೂತನ ಲೈನ್‌ಮನ್‌ಗಳ ನೇಮಕವಾಗಲಿದ್ದು ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಅಧಿಕಾರಿ ಭರವಸೆ ನೀಡಿದರು.
ಗ್ರಾಮಸ್ಥರಾದ ಸಾಧು ಅಂಚನ್ ಮಟ್ಟು, ದಿನೇಶ್ಚಂದ್ರ ಅಜಿಲ, ದೀಪಕ್, ಜಯಕುಮಾರ್, ಕುಬೆವೂರು, ಫೆಲಿಕ್ಸ್ ಡಿಸೋಜ ಕೆರೆಕಾಡು ಮತ್ತಿತರರು ಅಹವಾಲು ಸಲ್ಲಿಸಿದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಲ್ವಿನ್ ಪಕ್ಷಿಕೆರೆ, ಸದಸ್ಯರಾದ ಜನಾರ್ದನ ಕೆ.ಎಸ್.ರಾವ್ ನಗರ, ರಕ್ಷಿತ್ ಕೊಳಚಿ ಕಂಬಳ, ಮಂಗಳೂರು ಮೆಸ್ಕಾಂ ಇಂಜಿನಿಯರ್ ಕೃಷ್ಣರಾಜ ಕೆ, ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಐತಾಳ, ಸುರತ್ಕಲ್ ವಲಯದ ಎಡಬ್ಲುೃ ಪ್ರತಾಪ್ ಎಂ. ಮತ್ತಿತರರು ಉಪಸ್ಥಿತರಿದ್ದರು.
ಮೀಟರ್ ಸರಿಯಿಲ್ಲದೆ ಅಧಿಕ ಬಿಲ್
ಹಳೆಯಂಗಡಿಯ ಕರಿತೋಟ ಎಂಬಲ್ಲಿ ಗದ್ದೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಕಂಬ ಅಳವಡಿಸಿದ್ದಾರೆ, ಪ್ರತಿ ಗ್ರಾಮಕ್ಕೆ ಮೂರು ಲೈನ್‌ಮನ್ ಬೇಕು. ಕೆ.ಎಸ್.ರಾವ್ ನಗರದಲ್ಲಿ ಹಳೆಯ ಕಾಲದ ಟ್ರಾನ್ಸ್‌ಫಾರ್ಮರ್ ಸರಿಪಡಿಸಬೇಕು. ಮೂಲ್ಕಿ ಹಾಗೂ ಕಿನ್ನಿಗೋಳಿಗೆ ಪ್ರತ್ಯೇಕ ವಿದ್ಯುತ್ ಲೈನ್ ನಿರ್ಮಿಸಬೇಕು. ಕೆರೆಕಾಡು ಬಳಿಯ ಅನೇಕ ಮನೆಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆ, ಕುಬೆವೂರು ಬಳಿ ಮನೆಯೊಂದರ ವಿದ್ಯುತ್ ಮೀಟರ್ ಸರಿಯಿಲ್ಲದೆ ಅಧಿಕ ಬಿಲ್, ಬಪ್ಪನಾಡು ಸೇತುವೆ ಬಳಿ ಜೋತು ಬಿದ್ದ ವಿದ್ಯುತ್ ತಂತಿ ಸರಿಪಡಿಸಬೇಕು. ಕೋಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ವಾಹನ ಹೋಗುವಾಗ ವಿದ್ಯುತ್ ತಂತಿಗೆ ತಗಲುವಂತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು. ಶಿಮಂತೂರು ಕುಬೆವೂರು ಬಳಿ ವಿದ್ಯುತ್ ತಂತಿ ಅಪಾಯದ ಸ್ಥಿತಿಯಲ್ಲಿದೆ ಎಂಬ ದೂರುಗಳು ಕೇಳಿ ಬಂದವು.
ಜೋತು ಬಿದ್ದ ತಂತಿಯಿಂದ ಕೃಷಿಗೆ ತೊಂದರೆ
ಮೆಸ್ಕಾಂ ವ್ಯಾಪ್ತಿಯ ಕೋಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಅಮೃತಾನಂದಮಯಿ ನಗರದಲ್ಲಿ ಪ್ರತಿ ರಾತ್ರಿ ವಿದ್ಯುತ್ ಕಡಿತವಾಗುತ್ತಿದೆ. ಎಸ್‌ವಿಟಿ ಬಳಿಯ ಹುಡ್ಕೋ ಕಾಲೋನಿಯಲ್ಲಿ ಅಪಾಯಕಾರಿ ಮರ ತೆರವುಗೊಳಿಸಲು ಮೆಸ್ಕಾಂ ಇಲಾಖೆಗೆ ಹೇಳಿ ಹೇಳಿ ಸಾಕಾಗಿದೆ. ಸಿಬ್ಬಂದಿ ಕೊರತೆ ಎಂದು ಹೇಳುತ್ತಾರೆ ಎಂದು ಗುತ್ತಿಗೆದಾರ ನಾಗರಾಜ್, ಜೋಯಲ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು. ಮೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಹಲವೆಡೆ, ಗದ್ದೆಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಕೃಷಿ ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಗ್ರಾಮೀಣ ವರ್ಗದ ವಿದ್ಯಾರ್ಥಿಗಳು ಇದೇ ದಾರಿಯಲ್ಲಿ ಶಾಲೆಗೆ ತೆರಳುತ್ತಾರೆ. ಏನಾದರೂ ಅಪಾಯವಾದರೆ ಯಾರು ಹೊಣೆ? ಕಿಲ್ಪಾಡಿ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿ ಅಮೃತ್ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಿಂದ ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಗೋಪಿನಾಥ ಪಡಂಗ ಆತಂಕ ವ್ಯಕ್ತಪಡಿಸಿದರು.