ಜಿಲ್ಲೆ

ಎಂಇಎಸ್ ಮುಖಂಡರ ವಿರುದ್ಧ ದೂರು ದಾಖಲು

ಡಿ.ವಿ. ಕಮ್ಮಾರ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮುಖಂಡರ ವಿರುದ್ಧ ಇಲ್ಲಿನ ಮಾರ್ಕೆಟ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.

ಶನಿವಾರ ನಗರದ ಸಂಭಾಜಿ ಉದ್ಯಾನದಿಂದ ರ‌್ಯಾಲಿ ಆರಂಭಿಸಿದ್ದ ಎಂಇಎಸ್ ಮುಖಂಡರು, ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮರಾಠಾ ಮಂಡಳ ಸಭಾಭವನದಲ್ಲಿ ಸಮಾರೋಪಗೊಳಿಸಿದ್ದರು. ಈ ರ‌್ಯಾಲಿಗೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೂ ನಿಯಮ ಉಲ್ಲಂಘಿಸಿ ರ‌್ಯಾಲಿ ಮಾಡಿದ್ದರು. ಸಾರ್ವಜನಿಕ ಸಂಚಾರಕ್ಕೆ ಅಡ್ಡಿ, ಗಲಾಟೆ ಸೃಷ್ಟಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿರುವುದು, ಕರ್ನಾಟಕ ಸರ್ಕಾರದ ಸಾರ್ವಭೌಮತ್ವ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪದ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಮಾಜಿ ಶಾಸಕ ಮನೋಹರ ಕಿಣೇಕರ, ಮಾಲೋಜಿ ಅಷ್ಟೇಕರ, ಶುಭಂ ಶಳಕೆ, ರಮಾಕಾಂತ ಕೊಂಡುಸ್ಕರ ಸೇರಿದಂತೆ 35 ಜನರ ಹೆಸರು ಸಹಿತ ಒಟ್ಟು 150 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.