ಗಂಗೊಳ್ಳಿ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜತೆ ವಿಲೀನಗೊಳಿಸುವುದೂ ಸೇರಿ ವಿವಿಧ ಬೇಡಿಕೆಗಳೊಂದಿಗೆ ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಮಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಲಕ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಮಿತಿ ಸದಸ್ಯರು, ಕುಂದಾಪುರ ಬೆಂಗಳೂರು ನಡುವೆ ಹೊಸ ಪಡೀಲ್ ಬೈಪಾಸ್ ರೈಲು ಆರಂಭಿಸಬೇಕು, ಉಡುಪಿ ನಿಲ್ದಾಣಕ್ಕೆ ಅಮೃತ ಭಾರತ ಯೋಜನೆ ಅನುಷ್ಠಾನಗೊಳಿಸಬೇಕು, ಬಾರ್ಕೂರು ರೈಲು ನಿಲ್ದಾಣಕ್ಕೆ ಎರಡನೇ ಪ್ಲಾಟ್‌ಫಾರಂ ನಿರ್ಮಿಸಬೇಕು, ಭದ್ರತೆ ದೃಷ್ಟಿಯಿಂದ ಉಡುಪಿ ಜಿಲ್ಲಾ ನಿಲ್ದಾಣಗಳಿಗೆ ಆರ್‌ಪಿಎಫ್ ಪಡೆಗಳ ಹೆಚ್ಚುವರಿ ನೇಮಕಾತಿ ಮಾಡಬೇಕು, ಮತ್ಸ್ಯಗಂಧ ಮತ್ತು ಸಿಎಸ್‌ಟಿ ಸೂಪರ್ ಪಾಸ್ಟ್ ರೈಲುಗಳಿಗೆ ಎಲ್‌ಬಿಎಚ್ ಕೋಚ್ ಅಳವಡಿಕೆ ಮಾಡಬೇಕು ಎಂದರು.
ಸುಬ್ರಹ್ಮಣ್ಯ- ಸಕಲೇಶಪುರ ಘಾಟಿಯಲ್ಲಿ ಹೆಚ್ಚುವರಿ ರೈಲು ಸಂಚಾರಕ್ಕೆ ಎದುರಾಗುತ್ತಿರುವ ತಾಂತ್ರಿಕ ಅಡಚಣೆಗಳ ನಿವಾರಿಸಬೇಕು, ಸಮಯ ಬದಲಾವಣೆ ಮಾಡದೇ ಪಂಚಗಂಗಾ ರೈಲಿಗೆ ಹೆಚ್ಚು ಕೋಚ್ ಅಳವಡಿಕೆ ಸೇರಿದಂತೆ ಹಲವು ವಿಷಯಗಳನ್ನು ಸಚಿವರಿಗೆ ಮನವರಿಕೆ ಮಾಡಲಾಯಿತು.
ಸಮಿತಿ ಪರವಾಗಿ ಗಣೇಶ್ ಪುತ್ರನ್, ವಿವೇಕ್ ನಾಯಕ್, ಜಾಯ್ ಕರ್ವಾಲೋ, ನಾಗರಾಜ್ ಆಚಾರ್, ಪ್ರವೀಣ್ ಟಿ., ಅಭಿಜಿತ್ ಸಾರಂಗ್, ಪ್ರಥ್ವಿ ಕುಂದರ್, ಗೌತಮ್ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.