ಜಿಲ್ಲೆ

ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ!

ಚಿಕ್ಕೋಡಿ: ಹಾಡಹಗಲೇ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಈ ಕೊಲೆ ಪ್ರಕರಣ ನಡೆದಿದೆ.

ಕೊಲೆಗೀಡಾದ ವ್ಯಕ್ತಿಯನ್ನು ಪರಶುರಾಮ್ ಹಲಕರ್ಣಿ (32) ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ಈ ಭೀಕರ ಹತ್ಯೆ ನಡೆದಿದೆ. ಈತ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದ.

ಕೊಲೆಯಾದ ಸ್ಥಳದಲ್ಲಿ ಒಂದು ಕಾರು ಹಾಗೂ ಒಂದು ಬೈಕ್ ಕಂಡುಬಂದಿದೆ. ಶವದ ಪಕ್ಕದಲ್ಲೇ ಇದ್ದ ಕಾರಿನಲ್ಲಿ ಕೊಲೆಗೆ ಬಳಸಿದ್ದ ಲಾಂಗ್ ಮತ್ತು ಮದ್ಯ ಪತ್ತೆಯಾಗಿದೆ. ಕಾರಿನಡಿ ಸಿಲುಕಿದ ಸ್ಥಿತಿಯಲ್ಲಿ ಬೈಕ್ ಕಂಡುಬಂದಿದೆ. ಅಪಘಾತ ಮಾಡಿ ಕೊಲೆ ಮಾಡಿರಬಹುದಾ ಎಂಬ ಶಂಕೆಯೂ ಮೂಡಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.