ಬಾದಾಮಿ: ದೇಶದಲ್ಲಿ ಹಿಂದುಳಿದ ರಾಜ್ಯ ಬಿಹಾರ ಮತ್ತು ಕರ್ನಾಟಕದ ಹಿಂದುಳಿದ ಜಿಲ್ಲೆ ಕೋಲಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳು ಹೊರಹೊಮ್ಮಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತಾಗಲು ಶಿಕ್ಷಕರ ಪಾತ್ರ ಎತ್ತಿ ತೋರಿಸುತ್ತದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ನಗರದ ಎಸ್‌ವಿಪಿ ಸಂಸ್ಥೆಯ ಬಸವಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮಹಾದಾಸೆ ನನ್ನದಾಗಿದೆ. ದೂರದೃಷ್ಟಿಯಿಂದ ಮಕ್ಕಳ ಭವಿಷ್ಯ ರೂಪಿಸುವ ಮಹತ್ತರ ಯೋಜನೆಗಳಿಗೆ ನನ್ನ ಬೆಂಬಲವಿರುತ್ತದೆ. ತಾಲೂಕಿನಲ್ಲಿ ಐದು ಕೆಪಿಎಸ್ ಶಾಲೆ ಮಂಜೂರಾಗಿವೆ. ಶಿಕ್ಷಕರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಿ.ಜಿ. ಹಿರೇಮಠ ಉಪನ್ಯಾಸ ನೀಡಿದರು. ಕೆರೂರಿನ ಚರಂತಿಮಠದ ಶಿವಕುಮಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಾದಾಮಿ ಪುರಸಭೆ ಅಧ್ಯಕ್ಷ ಕಟ್ಟಿಮನಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಮ್ಮಾರ, ಕೆರೂರ ಪಪಂ ಅಧ್ಯಕ್ಷೆ ನಿರ್ಮಲಾ ಮದಿ, ತಹಸೀಲ್ದಾರ್ ಜೆ.ಬಿ. ಮಜ್ಜಗಿ, ನೌಕರರ ಸಂಘದ ಅಧ್ಯಕ್ಷ ರಮೇಶ ಅಥಣಿ, ಡಿ.ವಿ. ಜಾಧವ, ಬಿ.ಎಸ್. ಅಬ್ಬಿಗೇರಿ, ಉಜ್ವಲ ಬಸರಿ, ಎಚ್.ಎಂ. ಯತ್ನಟ್ಟಿ, ವೈ.ಎಸ್. ಮಜ್ಜಗಿ, ವಿ.ಡಿ. ವೈಕುಂಟೆ, ಆರ್.ಟಿ. ಪಟ್ಟಣಶೆಟ್ಟಿ, ಎಸ್.ಎಸ್. ಪಟ್ಟಣಶೆಟ್ಟಿ, ಎ.ಪಿ. ಮೇಟಿ, ಎಚ್.ಎಂ. ಹರದೊಳ್ಳಿ, ಬಿ.ಟಿ. ಹಳ್ಳಿ, ಬಿ.ಕೆ. ಚಿಮಲ್, ಎಂ.ಸಿ. ನಾಲತನಾಡ, ವೈ.ಬಿ. ಚಲವಾದಿ, ಎಸ್.ಪಿ. ಗೌಡರ ಇತರರಿದ್ದರು.
ಸೇವೆಯಿಂದ ನಿವೃತ್ತರಾದ 72 ಜನ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಡಾ.ಎಸ್. ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪುಷ್ಪಾರ್ಚಣೆ ಮಾಡಿದರು. ಸ್ಥಳೀಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಸ್ವಾಗತಿಸಿದರು.
ಬಿಇಒ ಬಿ.ಎಚ್. ಹಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕಂಗಳ, ಬಸಮ್ಮ ನರಸಾಪುರ ನಿರೂಪಿಸಿದರು. ಶೀಲಾ ಗೌಡರ ವಂದಿಸಿದರು.
ಭಾವಚಿತ್ರದ ಮೆರವಣಿಗೆ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಸ್.ರಾಧಾಕೃಷ್ಣನ್ ಮತ್ತು ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಸಂಗೀತ ವಾದ್ಯಗಳೊಂದಿಗೆ ಸಾರೋಟ ಮೂಲಕ ಮೆರವಣಿಗೆ ನಡೆಯಿತು.