ನಂಜನಗೂಡು: ಜನರ ಮನಸ್ಸಿನಲ್ಲಿ ಇನ್ನೂ ಸಹ ಮಾನಸಿಕ ಅಸ್ಪಶ್ಯತೆ ಜೀವಂತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೇಲು-ಕೀಳು ಎಂಬ ಮನೋಭಾವ ತೊಲಗಬೇಕು. ಹಿಂದು ಧರ್ಮದಲ್ಲಿ ಈಗಲೂ ಸಹ ವರ್ಣವ್ಯವಸ್ಥೆಯನ್ನು ದೇವರು ಸೃಷ್ಟಿ ಮಾಡಿದ್ದಾನೆ ಎಂಬ ನಂಬಿಕೆಯಿದೆ. ಇದನ್ನು ಸಂಪೂರ್ಣವಾಗಿ ತೆಗೆದರೆ ಮಾತ್ರ ಜಾತಿ ವ್ಯವಸ್ಥೆ ಹೋಗುತ್ತದೆ ಎಂದು ಹೇಳಿದರು.
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದು ಕೆಲಸವನ್ನು 500 ವರ್ಷಗಳ ಹಿಂದೆಯೇ ಮಾಡಿದ್ದಾರೆ. ಆ ಕಾಲದಲ್ಲಿಯೇ ಜಾತಿ ವ್ಯವಸ್ಥೆ ವಿರುದ್ಧ ಹೋರಾಟವನ್ನು ಮಾಡಿದರು. ಶೋಷಿತರ ಪರ ನಿಂತರು. ಕುಲ ಕುಲ ಕುಲವೆಂದು ಹೊಡೆದಾಡ ಬೇಡಿ ಎಂದು ಸಾರಿದರು ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನಂಜನಗೂಡಿನಲ್ಲಿ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಂಜನಗೂಡಿನಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಕನಕದಾಸರು ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಶಾಲೆ, ಕಾಲೇಜುಗಳಲ್ಲಿ ಸಹ ಕನಕದಾಸರ ಬಗ್ಗೆ ಈಗಲೂ ಸಂಶೋಧನೆಗಳು ಮುಂದುವರಿದಿವೆ. ಕನಕದಾಸರ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಯಬೇಕಿದೆ ಎಂದರು.
ಜಯಂತಿಗಳು ರಜೆಯಾಗಿ ಇರಬಾರದು. ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ಆಚರಣೆಗೆ ಮಹತ್ವ ಇರುತ್ತದೆ ಎಂದರು. ಮುಖ್ಯ ಭಾಷಣಕಾರ ಶಿಕ್ಷಕ ಕುಮಾರಸ್ವಾಮಿ ಮಾತನಾಡಿ, 15ನೇ ಶತಮಾನದಲ್ಲಿ ಸತ್ಯವನ್ನು ಸಾರಿದವರು ಕನಕದಾಸರು. ಕೀರ್ತನೆಗಳ ಮೂಲಕ ಈಗಲೂ ಕೂಡ ಪ್ರಸಿದ್ಧರಾಗಿದ್ದಾರೆ. ನಾನು ಎನ್ನುವ ಅಹಂಕಾರ ಹೋದರೆ ಸ್ವರ್ಗಕ್ಕೆ ಹೋಗಬಹುದು ಎಂದು ಹೇಳುತ್ತಿದ್ದರು. ಯಾವುದೋ ಒಂದು ಸಂದರ್ಭದಲ್ಲಿ ಕೊಪ್ಪರಿಕೆ ಚಿನ್ನ ಸಿಕ್ಕ ಸಂದರ್ಭದಲ್ಲಿ ಎಲ್ಲವನ್ನು ಅವರು ದಾನ ಮಾಡಿದರು. ಆನಂತರ ಇವರು ಕನಕದಾಸರಾಗಿ ಕರೆಯಲ್ಪಟ್ಟರು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎನ್.ಶ್ರೀಕಂಠ, ತಾಪಂ ಮಾಜಿ ಸದಸ್ಯ ಬಿ.ಪಿ. ಮಹದೇವ್, ನಗರಸಭೆ ಉಪಾಧ್ಯಕ್ಷ ರೆಹನಾ ಬಾನು, ಕುಮಾರಸ್ವಾಮಿ, ರಾಮಚಂದ್ರಯ್ಯ, ಕಳಲೆ ಕೇಶವಮೂರ್ತಿ, ಶಿವಕುಮಾರ್ ಕಾಸನೂರು, ಬಿ.ಒ. ಮಹೇಶ್, ಜೆರಾಲ್ಡ್ ರಾಜೇಶ್, ಕುರಿಹುಂಡಿ ರಾಜು, ಹಗಿನವಾಳು ಕೆಂಡಗಣ್ಣಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಕುರಟ್ಟಿ ಮಹೇಶ್, ರೈತ ಸಂಘದ ವಿದ್ಯಾಸಾಗರ್, ಡಿವೈಎಸ್ಪಿ ರಘು ಇತರರು ಇದ್ದರು.