ಮಸ್ಕಿಯಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ರಾಜ್ಯ ಪೌರ ಸೇವಾ ನೌಕರರ ಸಂಘದ ಕ್ರೀಡಾ ಕೂಟಕ್ಕೆ ಸಹಾಯಕ ಆಯುಕ್ತ ಅವಿನಾಶ ಶಿಂಧೆ ಚಾಲನೆ ನೀಡಿದರು. ಮುಖ್ಯಾಧಿಕಾರಿ ನರಸರಡ್ಡಿ, ಮಸ್ಕಿ ಪುರಸಭೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಎಂಜಿನಿಯರ್ ಮೀನಾಕ್ಷಿ, ಗದ್ದೆಪ್ಪ, ಆರ್.ಐ ಬಸವರಾಜ ಇತರರಿದ್ದರು. 
ಜಿಲ್ಲೆ

ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿ

ಮಸ್ಕಿ: ನಗರದ ಸ್ವಚ್ಛತೆ ಮಾಡಿ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಸಾಕಷ್ಟಿದೆ ಎಂದು ಲಿಂಗಸುಗೂರಿನ ಸಹಾಯಕ ಆಯುಕ್ತ ಅವಿನಾಶ ಶಿಂಧೆ ಹೇಳಿದರು.

ಪಟ್ಟಣದ ಪಬ್ಲಿಕ್ ಶಾಲೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಹಿನ್ನೆಲೆ ಪೌರಸೇವಾ ನೌಕರರ ಸಂಘದವತಿಯಿಂದ ಹಮ್ಮಿಕೊಂಡಿದ್ದ ಪೌರಸೇವಾ ನೌಕರರ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಕ್ರೀಡಾಕೂಟ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿ. ಈ ಕ್ರೀಡಾಕೂಟದಲ್ಲಿ ಅಧಿಕಾರಿ, ಸಿಬ್ಬಂದಿ ಪೌರನೌಕರ ಎಂಬ ಭೇದವಿಲ್ಲದೆ ಎಲ್ಲರೂ ಜತೆಯಾಗಿ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವಂತದ್ದಾಗಿದೆ. ಕೆಲಸದ ಜಂಜಾಟದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಿಬ್ಬಂದಿಗೆ ಈ ಕ್ರೀಡಾಕೂಟ ರಿಲೀಫ್ ನೀಡುತ್ತದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಮಾತನಾಡಿ, ಇಲಾಖೆಯ ನಿರ್ದೇಶನದಂತೆ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಸೆ. 23ರಂದು ಬಹುಮಾನ ವಿತರಿಸಲಾಗುವುದು ಎಂದರು.

ಕ್ರೀಡಾಕೂಟದಲ್ಲಿ ನೈರ್ಮಲ್ಯ ತಂಡ, ಕಚೇರಿ ತಂಡ, ನೀರು ಸರಬರಾಜು ವಿಭಾಗ ಸೇರಿದಂತೆ ಮೂರು ತಂಡಗಳ ಇದ್ದವು. ಕ್ರಿಕೆಟ್, ಕಬ್ಬಡಿ ಸೇರಿದಂತೆ ಇತರ ಕ್ರೀಡಾ ಕೂಟ ನಡೆದವು. ಪುರಸಭೆ ಸಿಬ್ಬಂದಿ ಜಗದೀಶ, ನಾಗರಾಜ, ಅಂಬಿಕಾ ಪಾಟೀಲ್, ಸೋಮನಾಥ, ಸುನಿಲ್ ಕುಮಾರ್, ಶಿವರಾಜ ಕಟ್ಟಿಮನಿ ಇತರರಿದ್ದರು.