ಜಿಲ್ಲೆ

ಸಾಧಕನಾಗಬೇಕಿದ್ದರೆ ಮಾನಸಿಕ ಸಿದ್ಧತೆ ಮುಖ್ಯ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ

ಮೈಸೂರು: ಯಾವುದೇ ವಿದ್ಯಾರ್ಥಿ ಸಾಧಕರಾಗಿ ರೂಪುಗೊಳ್ಳಬೇಕಾದರೆ, ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ಮುಖ್ಯ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ದಟ್ಟಗಳ್ಳಿಯ ಶ್ರೀ ಶಾರದಾ ಪಬ್ಲಿಕ್ ಶಾಲೆಯಲ್ಲಿ ನೂತನ ನಿರ್ಮಿಸಿರುವ ಎಸ್.ರಾಮನಾಥನ್ ಸ್ಮಾರಕ ಬ್ಲಾಕ್, ಶಾಲೆಯ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಎಳೆಯ ವಯಸ್ಸಿನ ಮಕ್ಕಳಲ್ಲಿ ಬದ್ಧತೆ ತುಂಬುವುದು ಸವಾಲಿನ ಕೆಲಸ. ಅದು ನೈಜ ಶಿಕ್ಷಕನಿಂದ ಮಾತ್ರ ಸಾಧ್ಯ. ಅಲ್ಲದೆ ಅದಕ್ಕೆ ವಿದ್ಯಾರ್ಥಿಯ ಸಹಕಾರವೂ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಾದವರು ಯಾವುದೇ ಸಾಧನೆ ಮಾಡಬೇಕಾದರೂ ಗುರಿ ಇಟ್ಟುಕೊಂಡು ಸಾಧನೆಗೆ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಚಿಕ್ಕಂದಿನಲ್ಲಿ ತಾಯಿ ಕಳೆದುಕೊಂಡ ವಿದ್ಯಾರ್ಥಿ, ಬೋಧನೆ ಮಾಡಿದ ಶಿಕ್ಷಕಿಯನ್ನೇ ತಾಯಿ ಎಂದು ಭಾವಿಸಿದ. ಶಿಕ್ಷಕಿಯ ಮಾರ್ಗದರ್ಶನವನ್ನು ಚಾಚೂ ತಪ್ಪದೇ ಪಾಲನೆ ಮಾಡಿದ ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾನೆ. ತನ್ನ ವಿವಾಹಕ್ಕೆ ಆತ ಅಕ್ಷರ ಕಲಿಸಿದ ಗುರುವನ್ನು ವಿಮಾನದಲ್ಲಿ ಕರೆಸಿಕೊಳ್ಳುತ್ತಾನೆ. ಅದೇ ಪ್ರಥಮವಾಗಿ ಶಿಕ್ಷಕಿ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ತನ್ಮೂಲಕ ಗುರುಗಳಿಗೆ ಅಗ್ರ ಸ್ಥಾನವನ್ನು ನೀಡಿ ಆರಾಧಿಸಿದ ಎಂದು ಹೇಳಿದರು.

ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರ ಬಗ್ಗೆ ಅತೀವವಾದ ಗೌರವ ಇಟ್ಟುಕೊಳ್ಳಬೇಕು. ಅಲ್ಲದೆ ಅವರು ಹೇಳಿದ್ದನ್ನು ಪರಿಪಾಲಿಸುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

ಶಾರದಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿಶೇಷವಾಗಿ ನಮ್ಮ ಹಿಂದು ಸಂಪ್ರದಾಯದಂತೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ತನ್ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದಲ್ಲದೆ, ನಮ್ಮ ಆಚಾರ-ವಿಚಾರ, ಸಂಸ್ಕಾರವನ್ನು ಉಳಿಸಿಕೊಂಡು ಮುಂದುವರಿಸಲು ಕೊಡುಗೆ ನೀಡುತ್ತಿದ್ದಾರೆ. ಈ ಪರಿಪಾಠ ಎಲ್ಲ ಕಡೆ ಅನುಸರಣೆಯಾಗಬೇಕು ಎಂದು ಸಲಹೆ ನೀಡಿದರು.

ಶಾಲಾ ಕಾರ್ಯದರ್ಶಿ ಮಂಜುನಾಥ್ ರಾಮನಾಥನ್ ಮಾತನಾಡಿ, ಶಾಲೆಯ ಮೂಲ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯಾಧುನಿಕ ಕಲಿಕಾ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಎಸ್.ರಾಮನಾಥನ್ ಸ್ಮಾರಕ ಬ್ಲಾಕ್ ನಿರ್ಮಿಸಲಾಗಿದೆ. ಇದರಿಂದ ಶಿಶುವಿಹಾರ ಮಕ್ಕಳು, ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಟ್ರಸ್ಟಿ ಶ್ರೀವತ್ಸ ರಾಮನಾಥನ್ ಮಾತನಾಡಿ, ನನ್ನ ತಂದೆ ರಾಮನಾಥನ್ ಅವರು 15 ಮಕ್ಕಳಿಂದ ಆರಂಭಿಸಿದ ಈ ಶಾಲೆಯಲ್ಲಿ 800 ವಿದ್ಯಾರ್ಥಿಗಳು ಅಧ್ಯಯನ ಮಾಡುವಷ್ಟು ಹೆಮ್ಮರವಾಗಿ ಬೆಳೆದಿದೆ. ಅವರು ಹೇಳಿಕೊಟ್ಟ ಮಾರ್ಗದಲ್ಲಿ ಸಂಸ್ಥೆ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಸ್ಮರಿಸಿದರು.

ಸಂಸ್ಥೆಯ ಖಜಾಂಚಿ ಕುಸುಮಾ ರಾಮನಾಥನ್, ಆಡಳಿತಾಧಿಕಾರಿ ಗುರುರಾಜ್, ಪ್ರಾಂಶುಪಾಲೆ ಶಾಲಿನಿ ಅಶೋಕ್ ಇತರರಿದ್ದರು. ಶಾರದಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.