ಬೆಂಗಳೂರು: ಮಾನಸಿಕ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಅ.15ರಂದು ಬೆಳಗ್ಗೆ 10 ಗಂಟೆಗೆ ನಿಮ್ಹಾನ್ಸ್ ಕನ್ವೆನ್ಷನ್ಸ್ ಸೆಂಟರ್‌ನಲ್ಲಿ ‘ಮಾನಸಿಕ ಆರೋಗ್ಯ ಸಂತೆ’ 3ನೇ ಆವೃತ್ತಿ ಹಮ್ಮಿಕೊಂಡಿದೆ.
ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಅತಿ ಮುಖ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಒತ್ತಡ ಸೇರಿ ಹಲವು ಕಾರಣಗಳಿಂದ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು, ಇಂತಹ ಸಮಸ್ಯೆ ಹೊಂದಿರುವವರನ್ನು ಕೀಳಾಗಿ ಕಾಣಲಾಗುತ್ತಿದೆ. ಹಾಗೆಯೇ ಇದಕ್ಕೆ ಚಿಕಿತ್ಸೆ ಪಡೆಯಲು ಜನರು ಹಿಂಜರಿಯುತ್ತಿದ್ದಾರೆ. ಇದರ ಬಗೆಗಿನ ಕಳಂಕ ಹೋಗಲಾಡಿಸಿ, ಅರಿವು ಮೂಡಿಸುವುದು ಈ ಸಂತೆಯ ಉದ್ದೇಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಎನ್‌ಸಿಆರ್‌ಬಿ ವರದಿ: ಮಾನಸಿಕ ಆರೋಗ್ಯವು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ ದೇಶದಲ್ಲಿ 2022ರಲ್ಲಿ 1.70 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 2021ಕ್ಕೆ ಹೋಲಿಸಿದಲ್ಲಿ ಆತ್ಮಹತ್ಯೆ ಪ್ರಕರಣಗಳು ಶೇ. 4.2 ಹೆಚ್ಚಳವಾಗಿವೆ. ಕೌಟುಂಬಿಕ ಸಮಸ್ಯೆಗಳು, ಅಸ್ವಸ್ಥತೆ, ವೃತ್ತಿಪರ ಸಮಸ್ಯೆ, ಮಾದಕ ಹಾಗೂ ಮದ್ಯವ್ಯಸನ, ದಿವಾಳಿತನ, ಸಾಲ, ಆಸ್ತಿ ವಿವಾದ, ನಿರುದ್ಯೋಗ ಸೇರಿ ವಿವಿಧ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗಿವೆ.
ಮಾನಸಿಕ ಆರೋಗ್ಯದ ಬಗೆಗಿನ ತಿಳಿವಳಿ ಕೊರತೆ ನಿವಾರಿಸಿ, ಸಮಸ್ಯೆ ಗುರುತಿಸುವುದು ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಸಂತೆ ಸಹಕಾರಿಯಾಗಲಿದೆ ಎಂದು ಸಂಸ್ಥೆ ಹೇಳಿದೆ.
ಮಾನಸಿಕ ಆರೋಗ್ಯ ಸಂತೆ 3ನೇ ಆವೃತ್ತಿಯಲ್ಲಿ ಸ್ಟಾಲ್‌ಗಳನ್ನು ಸ್ಥಾಪಿಸಲು ಆಸಕ್ತಿ ಹೊಂದಿರುವ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಞಛಿಛ್ಞಿಜಿಛ್ಟಿಜಞಜ್ಝಿ.್ಚಟಞ ಸಂಪರ್ಕಿಸಬಹುದು. ಮಾಹಿತಿಗೆ ದೂ: 080- 2699 5156 ಕರೆ ಮಾಡಿ.