ಕಾರವಾರ: ಬದಲಾದ ನಮ್ಮ ಜೀವನ ಶೈಲಿ, ಕಾರ್ಯ ವೈಖರಿಯಲ್ಲಿ ನಾವು ಮನಸ್ಸಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದೂ ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಶೇ.10 ರಷ್ಟು ಜನರು ಮಾನಸಿಕ ಅಸ್ವಸ್ಥರಾಗಿ ಬಳಲುತ್ತಿದ್ದು, ಅದರಲ್ಲಿ ಶೇ 1 ರಷ್ಟು ಜನರು ಕೂಡ ಚಿಕಿತ್ಸೆ ಪಡೆಯಲು ಮುಂದಾಗುತ್ತಿಲ್ಲ, ಮಾನಸಿಕ ಅಸ್ವಸ್ತತೆಗೆ ಒಳಾಗದ ವ್ಯಕ್ತಿಗಳು ಕಂಡು ಬಂದರೆ ಅವರನ್ನು ಸಮೀಪದ ಪೊಲೀಸರಿಗೆ ಒಪ್ಪಿಸಿ ಅವರು ಮುಂದಿನ ಚಿಕಿತ್ಸೆ ಕೊಡಿಸಲು ಮುಂದಾಗಬೇಕು. ಇದರಲ್ಲಿ ಇಲಾಖೆಗಳು ಹಾಗೂ ಸಮಾಜದ ಜವಾಬ್ದಾರಿ ದೊಡ್ಡದಿದೆ ಎಂದರು.
ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್, ಮಾನಸಿಕ ಕಾಯಿಲೆ ಬರಲು ಮುಖ್ಯ ಕಾರಣ ಅನುಮಾನ, ಅವಮಾನ, ಅಪಮಾನ. ಅವರುಗಳನ್ನು ಇವುಗಳನ್ನು ಮೆಟ್ಟಿನಿಂತರೆ ಯಾವ ಕಾಯಿಲೆಗಳು ಬರುವುದಿಲ್ಲ ಎಂದರು.
ಕ್ರಿಮ್ಸ್ ಮನೋ ವೈಜ್ಞಾನಿಕ ವಿಭಾಗದ ಮುಖ್ಯಸ್ಥ ಡಾ. ವಿಜಯರಾಜ ಎನ್. ಮಾತನಾಡಿ, ನಮ್ಮ ಜೀವನ ಶೈಲಿ ಮತ್ತು ಕೌಟುಂಬಿಕ ರಚನೆಯಲ್ಲಿನ ಬದಲಾವಣೆಯು ಇತ್ತೀಚೆಗೆ ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದರು.
ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ಎಚ್.ನಾಯಕ, ಸಿಪಿಐ ರಮೇಶ್ ಎಸ್. ಹೂಗಾರ, ಕ್ರಿಮ್ಸ್ ಪ್ರಾಂಶುಪಾಲ ಡಾ. ಶಿವಕುಮಾರ ಜಿ.ಎಲ್. ಮುಖ್ಯ ಆಡಳಿತಾಧಿಕಾರಿ ಟಿ.ಸಿ. ಹಾದಿಮನಿ, ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಶಂಕರ ರಾವ್ ಇದ್ದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜಾಗೃತಿ ಜಾಥಾ ನಡೆಯಿತು. ಡೀನ್ ಡಾ.ಗಜಾನನ ನಾಯಕ ಚಾಲನೆ ನೀಡಿದರು. ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಹಿಡಿದು ಜಾಥಾದಲ್ಲಿ ಸಂಚರಿಸಿದರು.