ಸೋಮವಾರಪೇಟೆ ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಆಲೂರು ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ ಉದ್ಘಾಟಿಸಿದರು. ತನ್ಮಯಿ, ಸಂಗೀತ, ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ಸುಮಲತಾ, ಲತಾ ಇದ್ದರು. 
ಜಿಲ್ಲೆ

ಗುರಿ ಮಟ್ಟಲು ಮಾನಸಿಕ ಆರೋಗ್ಯ ಮುಖ್ಯ

ರವಿಕುಮಾರ್ ಪಿ. ಕೆ

ಸೋಮವಾರಪೇಟೆ: ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪರ್ಣ ಕೃಷ್ಣಾನಂದ ಹೇಳಿದರು.

ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಚೌಡ್ಲು ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಹದಿಹರೆಯದಲ್ಲಿ ಮಾನಸಿಕ ಆರೋಗ್ಯದ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು, ಹಿರಿಯರು, ಪಾಲಕರು ಮತ್ತು ಶಿಕ್ಷಕರನ್ನು ಗೌರವಿಸುವುದು, ಅವರ ಮಾತು ಕೇಳುವುದು, ತಮ್ಮನ್ನು ತಾವು ಕಾಪಾಡಿಕೊಳ್ಳುವುದು, ಒಳ್ಳೆಯ ಅಲೋೀಚನೆ ಮಾಡುವುದು ಇಂತಹವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳು ಮಾನಸಿಕ ಅರೋಗ್ಯವಂತರು ಎಂದು ಗುರುತಿಸಲಾಗುತ್ತದೆ ಎಂದು ಹೇಳಿದರು.

ಕಾರಣವಿಲ್ಲದೆ ಚಿಂತೆ, ದುಃಖಪಡುವುದು, ಏಕಾಗ್ರತೆ ಕೊರತೆ, ಅವಶ್ಯಕವಿಲ್ಲದ ಕೋಪ, ಭಯಪಡುವುದು, ತಪ್ಪನ್ನು ಒಪ್ಪಿಕೊಳ್ಳದಿರುವುದು ಇವೆಲ್ಲಾ ಮಾನಸಿಕ ರೋಗದ ಲಕ್ಷಣಗಳು, ವಿದ್ಯಾರ್ಥಿಗಳಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಾಗ ಪಾಲಕರು ಮತ್ತು ಶಿಕ್ಷಕರು ಸೂಕ್ತ ತಜ್ಞ ವೈದ್ಯರನ್ನು ಭೇಟಿ ಮಾಡಿಸಿ, ಕೌನ್ಸಿಲಿಂಗ್ ಮಾಡಿಸಬೇಕು. ದೂರವಾಣಿ ಮೂಲಕ ಕರೆ ಮಾಡಿದರೆ ವೈದ್ಯರೇ ಶಾಲಾ ಕಾಲೇಜಿಗೆ ಬಂದು ಸೂಕ್ತ ಸಲಹೆಗಳನ್ನು ನೀಡುತ್ತಾರೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಮೊಬೈಲ್ ವ್ಯಸನ ಒಳ್ಳೆಯದಲ್ಲ. ಕಲಿಕೆಗೆ ಅವಶ್ಯವಿದ್ದಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು. 12 ರಿಂದ 18 ವರ್ಷದ ವಯಸ್ಸಿನಲ್ಲಿ ಶಾರೀರಿಕ, ಮಾನಸಿಕ ಬದಲಾವಣೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಪುರುಷರಿಂದ ಮಾನಸಿಕ ಕಿರುಕುಳ ಆದರೆ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದರೆ, ಅರೋಪಿಗಳ ವಿರುದ್ಧ ಪೋಕ್ಸೊ ಮೊಕದ್ದಮೆ ದಾಖಲಾಗುತ್ತದೆ. ವಿದ್ಯಾರ್ಥಿಗಳು ವೈಯುಕ್ತಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಿದರೆ, ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ತಿಳಿಸುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ನಿಯೋಜಿತ ಅಧ್ಯಕ್ಷೆ ತನ್ಮಯಿ ಪ್ರವೀಣ್, ನಿರ್ಗಮಿತ ಅಧ್ಯಕ್ಷ ಸಂಗೀತ ದಿನೇಶ್, ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ಕ್ಲಬ್‌ನ ಪದಾಧಿಕಾರಿಗಳಾದ ಸುಮಲತಾ ಪುರುಷೋತ್ತಮ್, ಲತಾ ಮಂಜು ಇದ್ದರು. ಉಪನ್ಯಾಸಕಿ ಚಂದ್ರಕಲಾ ಕಾರ್ಯಕ್ರಮ ನಿರ್ವಹಿಸಿದರು.