ಜಿಲ್ಲೆ

ಮಾನಸಿಕ ಆರೋಗ್ಯ ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಬಹಳ ಮುಖ್ಯ. ಇತರರೊಂದಿಗೆ ಬೆರೆಯದಿರುವುದು ಮಾನಸಿಕ ಒತ್ತಡ ಹೆಚ್ಚಾಗಲು ಪ್ರಮುಖ ಕಾರಣ ಎಂದು ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ ಹೇಳಿದರು.
ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಮನೋರೋಗ ಚಿಕಿತ್ಸಾ ವಿಭಾಗವು ಎಸ್‌ಡಿಎಂ ನರ್ಸಿಂಗ್ ಕಾಲೇಜು ಸಹಭಾಗಿತ್ವದಲ್ಲಿ ಮಾನಸಿಕ ಆರೋಗ್ಯವು ಪ್ರತಿಯೊಬ್ಬರ ಹಕ್ಕು ಎಂಬ ಧ್ಯೇಯೆಯೊಂದಿಗೆ ಸೋಮವಾರ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಹುತೇಕ ಮಾನಸಿಕ ಆರೋಗ್ಯವನ್ನು ಅರಿತು ಚಿಕಿತ್ಸೆ ನೀಡಿ ಗುಣಪಡಿಸಬಹುದು. ತಂತ್ರಜ್ಞಾನದ ಕಡಿಮೆ ಬಳಕೆ ಮತ್ತು ಇತರರನ್ನು ಅನುಕರಿಸದಿರುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬಹುದು. ವಿದ್ಯಾರ್ಥಿಗಳು ಮಾನಸಿಕವಾಗಿ ಸದಾ ಸದೃಢವಾಗಿದ್ದು, ದೈನಂದಿನ ಒತ್ತಡ ಎದುರಿಸುತ್ತಾ ಮುನ್ನೆಡೆಯಬೇಕು ಎಂದರು.
ಮಾನಸಿಕ ಆರೋಗ್ಯ ದಿನ ಸಪ್ತಾಹ ನಿಮಿತ್ತ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಕಿರು ನಾಟಕ ಪ್ರದರ್ಶನ, ಬಿತ್ತಿಪತ್ರ ಮತ್ತು ವಿದ್ಯಾರ್ಥಿಗಳಿಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ. ಉಮೇಶ ದೀಕ್ಷಿತ, ಡಾ. ಸುಧೀರ ಬಟ್ಬೊಲನ್ ತೀರ್ಪುಗಾರರಾಗಿ ಆಗಮಿಸಿದ್ದರು.
ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗ್ಡೆ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಡೇವಿಡ್ ಕೋಲಾ, ಮನೋರೋಗ ವಿಭಾಗದ ಮುಖ್ಯಸ್ಥ ಡಾ. ಅಭಯ ಮಟ್ಕರ್, ವಿಶ್ವ ವಿದ್ಯಾಲಯದ ಹಿರಿಯ ಅಧಿಕಾರಿಗಳು, ಅಂಗ ಸಂಸ್ಥೆ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಡಾ. ನಾಗೇಶ ಅಜ್ಜವಾಡಿಮಠ ಸ್ವಾಗತಿಸಿದರು. ಡಾ. ಸಚಿನ್ ಎಸ್. ವಂದಿಸಿದರು. ಡಾ. ಅರ್ಜುನ ಹಾಗೂ ಡಾ. ತ್ರಿಷಿಯಾ ನಿರೂಪಿಸಿದರು.