ಗುಂಡ್ಲುಪೇಟೆ: ಯಾವುದೇ ವ್ಯಕ್ತಿಯ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ತುಂಬ ಮುಖ್ಯವಾಗಿದೆ ಎಂದು ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ಟಿ.ದೀಪು ಹೇಳಿದರು.
ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಆರೋಗ್ಯ ಇಲಾಖೆಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಮಾನಸಿಕ, ದೈಹಿಕ ಆರೋಗ್ಯವಂತ ಪ್ರತಿ ಮನುಷ್ಯನೂ ದೇಶದ ಉತ್ತಮ ಪ್ರಜೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಮಾನಸಿಕ ಒತ್ತಡದಿಂದ ವಿದ್ಯಾರ್ಥಿಗಳು ಬಳಲುವಂತಾಗಿದೆ. ಆದ್ದರಿಂದ ಮಕ್ಕಳಿಗೆ ಸಂಗೀತ, ಕಲೆ, ಯೋಗಾಭ್ಯಾಸ, ವ್ಯಾಯಾಮಗಳನ್ನು ಅಭ್ಯಾಸ ಮಾಡಿಸುವ ಮೂಲಕ ಚಿಕ್ಕವಯಸ್ಸಿನಿಂದಲೇ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಕಲಿಸಿದರೆ ಉತ್ತಮ ಪ್ರಜೆಗಳಾಗಲು ಅನುಕೂಲವಾಗುತ್ತದೆ. ಬಡ ಹಾಗೂ ಆರ್ಥಿಕವಾಗಿ ದುರ್ಬಲರಿಗೆ ನ್ಯಾಯಾಲಯ ಉಚಿತ ಕಾನೂನು ಸಲಹೆ ಹಾಗೂ ಸೇವೆಗಳನ್ನು ನೀಡುತ್ತಿದ್ದು ಅರ್ಹರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಫಿಜಿಷಿಯನ್ ಡಾ.ತ್ರಿವೇಣಿ ಮಾತನಾಡಿ, ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವು ನೀಡುವ ಸಲುವಾಗಿ 1992ರಿಂದ ಅ 10ರಂದು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಮಾನಸಿಕ ಅಸ್ವಸ್ಥರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಸಮಾನತೆಯಿಂದ ಬದುಕುವಂತೆ ಮಾಡಲು ಆಸ್ಪತ್ರೆಗಳಲ್ಲಿ ಅವರಿಗೆ ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಆರೋಗ್ಯಾಧಿಕಾರಿ ಕಚೇರಿಯ ಪುಟ್ಟಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ ಹಾಗೂ ಇತರರು ಇದ್ದರು.