ಮದ್ದೂರು: ಮಾನಸಿಕ ಖಿನ್ನತೆಗೊಳಾಗಿರುವ ತಾಯಿಗೆ 7ನೇ ತರಗತಿ ಮಗಳೇ ದಿಕ್ಕು…ಕಷ್ಟದಲ್ಲಿ ಜೀವನ ಸಾಗಿಸುತ್ತಿರೊ ಅಮ್ಮ- ಮಗಳು…
ತಾಲೂಕಿನ ಚಾಪುರದೊಡ್ಡಿ ಗ್ರಾಮದ ನಿವಾಸಿ ಯಶೋದಾ ಅವರ ಮನಕಲುಕುವ ಕಥೆಯಿದು. ಯಶೋದಾ ಅವರ ತಾಯಿ ಇದ್ದಾಗ ಯಶೋದಾ ಮತ್ತು ಮಗಳು ಸುಮಿತ್ರಾಳನ್ನು ಕಷ್ಟದಲ್ಲಿಯೂ ನೋಡಿಕೊಳ್ಳುತ್ತಿದ್ದರು. ಜೀವನ ಬಂಡಿ ಹೇಗೋ ಸಾಗುತ್ತಿತ್ತು. ವರ್ಷದ ಹಿಂದೆ ಯಶೋದಾ ಅವರ ತಾಯಿ ಕಾಲವಾದರು. ಇದರಿಂದ ಮಾನಸಿಕ ಖಿನ್ನತೆಗೊಳಾಗಾದ ಆಕೆಯನ್ನು ನೋಡಿಕೊಳ್ಳುವ ಹೊಣೆಗಾರಿಕೆ ಆಕೆಯ ಪುತ್ರಿ ಸುಮಿತ್ರಾ ಹೆಗಲಿಗೆ ಬಂತು.
ಸುಮಿತ್ರ ಚಾಪುರದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದು, ಇನ್ನೂ ಆಟವಾಡುವ ವಯಸ್ಸು. ಲೋಕಜ್ಞಾನ ತಿಳಿದಿಲ್ಲ. ಓದಿಕೊಂಡು ಎಲ್ಲರಂತೆ ಇರಬೇಕಾದ ಸುಮಿತ್ರ ತಾಯಿಯನ್ನು ಅವಳ ಇತಿಮಿತಿಯಲ್ಲಿ ಚೆನ್ನಾಗಿ ನೋಡುಕೊಳ್ಳುತ್ತಿದ್ದಾಳೆ. ಸ್ನಾನ ಮಾಡಿಸುವುದು, ಊಟ, ತಿಂಡಿ ಮಾಡಿಕೊಡುವುದು ಸೇರಿದಂತೆ ಎಲ್ಲವನ್ನೂ ಮಾಡುವ ಮೂಲಕ ತಾಯಿಯ ಋಣ ತೀರಿಸುತ್ತಿದ್ದಾಳೆ.
ಗ್ರಾಮದಲ್ಲಿ ಇವರಿಗೆ ಚಿಕ್ಕ ಮನೆಯಿದ್ದು, ಸಂಬಂಧಿಕರು ಕಟ್ಟಿಸಿಕೊಟ್ಟಿದ್ದಾರೆ. ಪಡಿತರ ಅಂಗಡಿಯಲ್ಲಿ ಅಕ್ಕಿ ಪಡೆಯುವ ಈ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಯೋಜನೆಯಡಿ 800 ರೂ. ಹೊರತುಪಡಿಸಿ ಯಾವುದೇ ಸವಲತ್ತು ಇಲ್ಲ. ಇದರಲ್ಲೇ ಇಬ್ಬರೂ ಜೀವನ ಸಾಗಿಸಬೇಕು. ಯಶೋದಾ ಅವರ ಆಧಾರ್ ಕಾರ್ಡ್ ಸರಿ ಇಲ್ಲದ ಕಾರಣ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಬರುತ್ತಿಲ್ಲ. ಈಗ ಆಧಾರ್ ಕಾರ್ಡ್ ಮಾಡಿಸಲಾಗಿದ್ದು, ಮುಂದೆ ಬರಬಹುದು ಎಂಬ ಲೆಕ್ಕಾಚಾರ ಅವರದು.
ತಾಯಿ ಮತ್ತು ಮಗಳಿಗೆ ಗ್ರಾಮಸ್ಥರು ಕೂಡ ಸಹಕಾರ ನೀಡುತ್ತಿದ್ದು, ಹಬ್ಬ-ಹರಿದಿನಗಳಲ್ಲಿ ಊಟ, ತಿಂಡಿ ನೀಡುತ್ತಾರೆ. ಕಷ್ಟದ ಸಮಯದಲ್ಲಿ ಹಲವು ರೀತಿಯಲ್ಲಿ ಸಹಾಯ ಮಾಡುವ ಮಾಡುತ್ತಿದ್ದಾರೆ.
ಇನ್ನು ಶಾಲೆಯಲ್ಲಿ ಮಧ್ಯಾಹ್ನ ನೀಡುವ ಬಿಸಿಯೂಟವನ್ನು ತಾನೂ ಊಟ ಮಾಡಿ ಉಳಿಕೆಯನ್ನು ಸುಮಿತ್ರಾ ತಾಯಿಗೆಂದು ನೀಡುತ್ತಾಳೆ. ರಜಾ ದಿನಗಳಲ್ಲಿ ಮನೆಯಲ್ಲಿರುವ ಅಕ್ಕಿಯಲ್ಲಿ ತಿಂಡಿ ಮತ್ತು ಅಡುಗೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸುಮಿತ್ರಾ ಚೆನ್ನಾಗಿ ಓದುವ ಮೂಲಕ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾಳೆ. ಈಕೆಗೆ ಮುಂದೆ ಶಿಕ್ಷಣ ಕೊಡಿಸುವ ಮತ್ತು ಯಶೋದಾ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸವಾಗಬೇಕಿದೆ.
ಚಾಪುರದೊಡ್ಡಿಗೆ ನಾನೇ ಭೇಟಿ ನೀಡಿ ಪರಿಶೀಲಿಸುತ್ತೇನೆ. ತಾಯಿ ಮತ್ತು ಮಗಳಿಂದ ಮಾಹಿತಿ ಪಡೆದು ಸರ್ಕಾರದಿಂದ ದೊರಕಿಸಿಕೊಡಬಹುದಾದ ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಕೆ.ಎಸ್.ಸೋಮಶೇಖರ್ ತಹಸೀಲ್ದಾರ್, ಮದ್ದೂರು.
ತಾಯಿ ಮತ್ತು ಮಗಳು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಮೂಲಸೌಕರ್ಯ ಒದಗಿಸಿಕೊಡುವ ಜತೆಗೆ ಭವಿಷ್ಯದಲ್ಲಿ ಸುಮಿತ್ರಾಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರ ಜತೆಗೆ ಆಕೆಯ ತಾಯಿಗೆ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಬೇಕು.
ಸಿ.ಆರ್.ಸುರೇಶ್ ಚಾಪುರದೊಡ್ಡಿ ಮುಖಂಡ