ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕ ಒತ್ತಡದಿಂದ ಹೊರಬರಬಹುದು. ನಮ್ಮಲ್ಲಿನ ಖಿನ್ನತೆ ದೂರ ಇಡಬಹುದು. ಕ್ರೀಡೆಗಳು ದೇಹಕ್ಕೆ ವ್ಯಾಯಾಮ ನೀಡುತ್ತವೆ ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ವಾಣಿಜ್ಯ ಹಾಗೂ ಕಲಾ ಕಾಲೇಜಿನ ಆಶ್ರಯದಲ್ಲಿ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಹರ ಮಟ್ಟದ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕು. ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಜೆಎಸ್ಎಸ್ನಲ್ಲಿ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ, ಪದವಿ ತರಗತಿಗಳಲ್ಲಿ ಅಧ್ಯಯನ ಮಾಡುವ ಸುಮಾರು 250 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ನೀಡಲಾಗುತ್ತಿದೆ. ಇದರಿಂದ ಒಳ್ಳೆಯ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ ಎಂದರು.
ಸುರೇಶ ಕೆ.ಪಿ ಮಾತನಾಡಿ, ಪಠ್ಯದ ಜತೆಗೆ ಕ್ರೀಡೆಗಳಲ್ಲಿ ಆಸಕ್ತಿ ವಹಿಸಿ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಬೇಕು. ಜೆಎಸ್ಎಸ್ ಸಂಸ್ಥೆಯು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಂಸ್ಥೆ ಕ್ರೀಡಾಪಟುಗಳು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕ್ರೀಡಾಪಟುಗಳನ್ನು ನೀಡಿರುವ ಕೀರ್ತಿ ಸಲ್ಲುತ್ತದೆ ಎಂದರು.
ಯು.ಎನ್.ಹಜಾರೆ, ವಿ.ಎಚ್. ಕಲಾದಗಿ, ಭೀಮಣ್ಣನವರ, ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಇತರರು ಇದ್ದರು. ರವಿವರ್ಮ ಜೋಶಿ ಸ್ವಾಗತಿಸಿದರು. ಡಾ.ಎಸ್.ಕೆ. ನಡುವಿನಕೇರಿ ನಿರೂಪಿಸಿದರು. ಪವನ ಗೊರವರ ವಂದಿಸಿದರು.