ಮೈಸೂರು: ಹಾಕಿ ಮೈಸೂರು ಸಂಸ್ಥೆ ವತಿಯಿಂದ ಜ.18 ರಿಂದ 21ರವರೆಗೆ ನಗರದ ಮೈಸೂರು ವಿಶ್ವವಿದ್ಯಾಲಯದ ಹಾಕಿ ಮೈದಾನದಲ್ಲಿ ಪುರುಷರ ಆಹ್ವಾನಿತ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಖಜಾಂಚಿ ಪೊನ್ನಪ್ಪ ತಿಳಿಸಿದರು.
ಇದರಲ್ಲಿ ವಿವಿಧ ಇಲಾಖೆ, ಕಂಪನಿ ಹಾಗೂ ಇತರೆ ಜಿಲ್ಲಾ ತಂಡ ಸೇರಿದಂತೆ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. ಜ.18ರ ಬೆಳಗ್ಗೆ 10 ಗಂಟೆಗೆ ಮಾಜಿ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡುವರು. ಈ ಪಂದ್ಯಾವಳಿ ಲೀಗ್ ಮತ್ತು ನೌಕೌಟ್ ಮಾದರಿಯಲ್ಲಿ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ತಂಡಗಳನ್ನು ನಾಲ್ಕು ಗುಂಪುಗಳಂತೆ ವಿಂಗಡಿಸಲಾಗುವುದು.ಜ.21ರ ಸಂಜೆ 4 ಗಂಟೆಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ರಾಜ್ಯ ಹಾಕಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ವಿ.ಎಸ್.ಸುಬ್ರಮಣ್ಯ ಗುಪ್ತ, ಸಂಸದ ಪ್ರತಾಪ್‌ಸಿಂಹ ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ ಎರಡು ಲಕ್ಷ, ದ್ವಿತೀಯ ಬಹುಮಾನ ಒಂದೂವರೆ ಲಕ್ಷ, ತೃತೀಯ ಬಹುಮಾನ ಒಂದು ಲಕ್ಷ, ನಾಲ್ಕನೆ ಬಹುಮಾನ 50 ಸಾವಿರ ರೂ. ಆಗಿದ್ದು, ವಿಜೇತ ತಂಡಗಳಿಗೆ ಟ್ರೋಫಿ ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ದಿಲೀಪ್, ಕಾರ್ಯದರ್ಶಿ ಸಿ.ಟಿ.ಸತೀಶ್, ಗಿರೀಶ್ ಇದ್ದರು.