ಜಿಲ್ಲೆ

ಲಿಂಗಬಸವೇಶ್ವರ ಜಾತ್ರೋತ್ಸವ ಇಂದಿನಿಂದ

ಮೆಣಸಗಿ: ಗ್ರಾಮದ ಶ್ರೀ ಲಿಂಗಬಸವೇಶ್ವರ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವ ಸೆ.7ರಿಂದ 9ರ ವರೆಗೆ ಅದ್ದೂರಿಯಾಗಿ ಜರುಗಲಿದೆ.
7ರಂದು ಬೆಳಗ್ಗೆ 6ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಂಜೆ 3ಗಂಟೆಗೆ ಪವಾಡಯೋಗಿ ಶ್ರೀ ಲಿಂಗಬಸವೇಶ್ವರ ರಥೋತ್ಸವ ನೆರವೇರಲಿದೆ.

ರಾತ್ರಿ 8ಗಂಟೆಗೆ ಮಹಾಪ್ರಸಾದ, ರಾತ್ರಿ 10.30ಗಂಟೆಗೆ ಶ್ರೀ ಲಿಂಗಬಸವೇಶ್ವರ ನಾಟ್ಯಸಂಘದಿಂದ ನಾಟಕ ಪ್ರದರ್ಶನಗೊಳ್ಳಲಿದೆ. 8ರಂದು ಬೆಳಗ್ಗೆ 10ಗಂಟೆಗೆ ಶ್ರೀಶರಣಬಸವೇಶ್ವರ ಪ್ರೌಢಶಾಲೆಯ ಮೈದಾನದಲ್ಲಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಭಜನಾಪದ, ಗೀಗಿಪದಗಳ ಗಾಯನ ಸೇರಿ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಯಂಕಾಲ 7ಗಂಟೆಗೆ ಶಿವಾನುಭವ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ಕಿಲ್ಲಾ ತೊರಗಲ್ಲದ ಗಚ್ಚಿನ ಹಿರೇಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸುವರು, ಮುದಿಯಪ್ಪಯ್ಯ ಸ್ವಾಮೀಜಿಗಳು ಅಧ್ಯಕ್ಷತೆ, ಉಪನ್ಯಾಸಕರಾಗಿ ಎಸ್.ಡಿ. ಯರಗೊಪ್ಪ, ವಿಶೇಷ ಆಹ್ವಾನಿತರಾಗಿ ಡಾ.ಮಂಜಮ್ಮ ಜೋಗತಿ ಆಗಮಿಸಲಿದ್ದಾರೆ.


9ರಂದು ಬೆಳಗ್ಗೆ 10ಗಂಟೆಗೆ ಜರುಗುವ ಸಾಮೂಹಿಕ ವಿವಾಹದ ಸಾನ್ನಿಧ್ಯವನ್ನು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಮಹಾಸ್ವಾಮೀಜಿಗಳು ವಹಿಸುವವರು. ಶಾಸಕರಾದ ಸಿ.ಸಿ. ಪಾಟೀಲ, ಜಿ.ಎಸ್. ಪಾಟೀಲ ಮುಖ್ಯ ಅತಿಥಿಗಳಾಗಿದ್ದಾರೆ.

ಮಠದ ವಿಶೇಷ: ಸುಮಾರು 150 ವರ್ಷಗಳ ಹಿಂದೆ ಚಿಕ್ಕ ಗುಡಿಯಲ್ಲಿದ್ದ ಮಠವು ಇಂದು ಬೃಹತ್ ಪ್ರಮಾಣದಲ್ಲಿ ನಿರ್ಮಾಣವಾಗಿದೆ. ಮಠದ ಮೂರ್ತಿಯ ಮುಖವಾಡ ಬೆಳ್ಳಿಯಿಂದ ಕೂಡಿದೆ. ಈ ಮಠವು ಜಾತಿ, ಮತ, ಪಂಥಗಳ ಏಕತೆಗೆ ಹೆಸರುವಾಸಿಯಾಗಿದೆ. ಶ್ರೀ ಗುರಯ್ಯನವರ ಔದಾರ್ಯ ಗುಣಗಳ ಪ್ರತೀಕವೆಂಬಂತೆ ಶ್ರಾವಣದ ಮೂರನೇ ಗುರುವಾರ ಶ್ರೀ ಲಿಂಗಬಸವೇಶ್ವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಸಂಗ್ರಾಣ ಕಲ್ಲು ಎತ್ತುವ ಸ್ಪರ್ಧೆ, ಶಿವಾನುಭವ ಕಾರ್ಯಕ್ರಮ ಗಮನ ಸೆಳೆಯಲಿವೆ.