ಪುತ್ತೂರು: ಮಡಗಾಂವ್- ಮಂಗಳೂರು ನಡುವೆ ಓಡಾಡುವ ಮೆಮು ರೈಲು ಸಂಚಾರವನ್ನು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕೆಂದು ಶಾಸಕ ಅಶೋಕ್ ಕುಮಾರ್ ರೈಯವರು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದು, ಅಗತ್ಯಕ್ರಮದ ಭರವಸೆ ಲಭಿಸಿದೆ.
ಮೆಮು ರೈಲು ಸಂಚಾರವನ್ನು ಕಬಕ ಪುತ್ತೂರು ನಿಲ್ದಾಣದವರೆಗೆ ವಿಸ್ತರಣೆ ಮಾಡಬೇಕೆಂಬ ಬೇಡಿಕೆಯನ್ನು ರೈಲ್ವೆ ಯಾತ್ರಿ ಸಂಘದಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ನೀಡಿದ್ದರು. ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿರುವ ಶಾಸಕರು, ಈ ಮನವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ತಕ್ಷಣ ಸೌಥರ್ನ್ ರೈಲ್ವೆ, ಸೌತ್ ವೆಸ್ಟ್ ರೈಲ್ವೆ, ಕೊಂಕಣ ರೈಲ್ವೆ ಸೇರಿ ಸ್ಥಳೀಯ ಸಂಸದರಿಗೆ ಪತ್ರ ಬರೆದು ಅಗತ್ಯತೆಯನ್ನು ತಿಳಿಸಿದ್ದಾರೆ.
ಈಗ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಕಚೇರಿ ಉಪಪ್ರಧಾನ ವ್ಯವಸ್ಥಾಪಕ ಕುಲದೀಪ್, ಪುತ್ತೂರು ಶಾಸಕರಿಗೆ ಪತ್ರಬರೆದಿದ್ದು, ಮೆಮು ರೈಲನ್ನು ಬಂಟ್ವಾಳ, ಕಬಕ ಪುತ್ತೂರು ನಿಲುಗಡೆಯೊಂದಿಗೆ ಸುಬ್ರಹ್ಮಣ್ಯ ರೋಡ್‌ವರೆಗಿನ ವಿಸ್ತರಣೆಯ ಮನವಿಯನ್ನು ಸ್ವೀಕರಿಸಲಾಗಿದ್ದು, ಪರಿಶೀಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.