ರಬಕವಿ/ಬನಹಟ್ಟಿ: ನೆನಪು ಪ್ರತಿಯೊಬ್ಬರ ನಿಜವಾದ ಆಸ್ತಿ. ಇದನ್ನೇ ಮರೆತರೆ ಎಲ್ಲವನ್ನೂ ಕಳೆದುಕೊಂಡಂತೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ಹಿರೇಮಠದಲ್ಲಿ ಲಿಂ. ಶಾಂತವೀರ ಮಹಾಸ್ವಾಮಿಗಳ 34ನೇ ಚಿರಲಿಂಗಾಂಗ ಸಾಮರಸ್ಯ ಹಾಗೂ ಧಾರ್ಮಿಕ ಪ್ರವಚನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಲೆ, ಸಾಹಿತ್ಯ, ಜ್ಞಾನ, ಧ್ಯಾನ ಹಾಗೂ ಚಿಂತನೆಗಳೇ ನಿಜವಾದ ಆಸ್ತಿ. ಹೊಸ ಆಯಾಮ ಮತ್ತು ಮಾರ್ಗದರ್ಶನ ನೀಡುವವರ ಸ್ಮರಣೆಯಾಗಬೇಕು. ಕಠೋರ ಹಾಗೂ ಮೃದು ಸ್ವಭಾವ ಹೊಂದುವ ಮೂಲಕ ತನ್ನನ್ನು ತಾನು ಸಮಾಜಕ್ಕೆ ಮೀಸಲಿಡುವವ ಮಹಾತ್ಮನಾಗುತ್ತಾನೆ. ಅಂಥವರೇ ನಮ್ಮೆಲ್ಲರ ಬದುಕಿಗೆ ಮಾದರಿಯಾಗುತ್ತಾರೆ ಎಂದರು.
ಶಾಂತಿಯನ್ನು ಹುಡುಕುವುದರಲ್ಲಿ ಅರ್ಥವಿಲ್ಲ. ಅದು ನಮ್ಮೆಲ್ಲರಲ್ಲಿಯೂ ದೊರಕುತ್ತದೆ. ನಾನು, ಬಯಕೆ, ಅಹಂಕಾರ ಮತ್ತು ಆಸೆಗಳನ್ನು ಬದಿಗೊತ್ತಿದಾಗ ಶಾಂತಿ ದೊರಕುತ್ತದೆ ಎಂದರು.
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿ, ಶಾಂತಿ, ನೆಮ್ಮದಿ ಹಾಗೂ ಸುಖದ ಬದುಕಿಗೆ ಮಠಗಳ ಕಾರ್ಯ ನಿರಂತರವಾಗಿವೆ. ಬದುಕು ಹಸನಾಗಿಸಲು ಆಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದರು.
ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶ್ರೀಗಳು, ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭು ಶ್ರೀಗಳು, ರಾಜಶೇಖರ ಮಾಲಾಪುರ, ಶ್ರೀಪಾದ ಬಾಣಕಾರ, ಶ್ರೀಶೈಲ ದಭಾಡಿ, ಮಲ್ಲಿಕಾರ್ಜುನ ತುಂಗಳ, ಭೀಮಶಿ ಮಗದುಮ್, ಚಟ್ಟರಕಿಯ ಶಂಕ್ರಯ್ಯ ಶಾಸಿಗಳು ಉಪಸ್ಥಿತರಿದ್ದರು.