ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ಬಹುಕಾಲ ನೆನಪಿಡುವಂತಹ ಸ್ಮರಣಿಕೆಯನ್ನು ನೀಡಬೇಕು ಎಂದು ಸ್ಮರಣಿಕೆ ಸಮಿತಿಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಮರಣಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನ ಯಶಸ್ವಿಗೊಳಿಸಲು ಪ್ರತಿಯೊಬ್ಬರ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸೋಣ. ಸಮಿತಿ ಅಧ್ಯಕ್ಷರು, ಗಣ್ಯರು, ಕಲಾವಿದರು ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ ಸೇರಿದಂತೆ ಕನಿಷ್ಠ 4 ಸಾವಿರ ಪ್ರಶಸ್ತಿ ಪತ್ರಗಳ ಅವಶ್ಯಕತೆ ಇದೆ. ಇದರ ಜತೆಗೆ 3000 ಬ್ಯಾಗ್‌ಗಳ ವ್ಯವಸ್ಥೆ ಮಾಡಬೇಕು. ಇದಲ್ಲದೆ ಎಲ್ಲ ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ಹಾಗೂ ಮುಖಂಡರಿಗೆ ಸ್ಮರಣಿಕೆ ನೀಡಬೇಕು ಎಂದರು.
ಹೊರ ಜಿಲ್ಲೆಯಿಂದ ಬರುವ ಕನ್ನಡಿಗರು ಹೊಗಳುವ ರೀತಿಯಲ್ಲಿ ಸ್ಮರಣಿಕೆಯನ್ನು ನೀಡಬೇಕು. ಎಲ್ಲ ಜಿಲ್ಲಾಧ್ಯಕ್ಷರಿಗೆ ಸನ್ಮಾನ ಹಾಗೂ ನೆನಪಿನ ಕಾಣಿಕೆ ನೀಡಬೇಕು. ಪ್ರತಿ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಇರಬೇಕು. ಸ್ಮರಣಿಕೆಯು ಪರಿಸರ ಸ್ನೇಹಿಯಾಗಿರಬೇಕು. ಸ್ಮರಣಿಕೆ ಸಮಿತಿಯ ಉಪ ಸಮಿತಿಗಳನ್ನು ರಚಿಸಿ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು. ಇದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಸಾಪ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸ್ಮರಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಿ.ಟಿ.ವೀರಪ್ಪ, ಉಪನ್ಯಾಸಕ ಮುತ್ತೇಗೆರೆ ಮಂಜು, ಮುಜರಾಯಿ ಇಲಾಖೆ ತಹಸೀಲ್ದಾರ್ ತಮ್ಮಣ್ಣಗೌಡ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಚಂದ್ರಲಿಂಗು, ಮುಖಂಡರಾದ ಕುಮಾರ್, ನಾಗೇಶ್, ಸೋಮು, ಕೃಷ್ಣ ಸ್ವರ್ಣಸಂದ್ರ ಇತರರಿದ್ದರು.
ಪೂರ್ಣ ಪ್ರಮಾಣದ ತರಬೇತಿ ಮುಖ್ಯ
ಸಮ್ಮೇಳನ ಪರಿಣಾಮಕಾರಿಯಾಗಿ ಜರುಗಲು ಜಿಲ್ಲೆಯಲ್ಲಿರುವ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸ್ವಯಂ ಸೇವಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡುವುದು ಬಹುಮುಖ್ಯವಾಗಿದೆ ಎಂದು ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಪದವಿ, ಪಿಯು ಕಾಲೇಜು, ಪ್ರೌಢಶಾಲೆಯ ಎನ್‌ಸಿಸಿ, ಎನ್‌ಎಸ್‌ಎಸ್ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, ಬಿಇಡಿ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು. ಅವರಿಗೆ ಬ್ಯಾಡ್ಜ್, ಟೀ ಶರ್ಟ್, ಟೋಪಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಅಭಿನಂದನಾ ಪತ್ರವನ್ನು ನೀಡುವಂತೆ ತಿಳಿಸಿದರು.
ಜಿಲ್ಲೆಯಲಿ ಆಸಕ್ತಿಯುಳ್ಳ ವಿವಿಧ ಸಂಘ ಸಂಸ್ಥೆಗಳ ಹಾಗೂ ಸ್ವಯಂ ಪ್ರೇರಿತವಾಗಿ ಸಮ್ಮೇಳನದಲ್ಲಿ ಕಾರ್ಯ ನಿರ್ವಹಿಸುವವವರಿಗೂ ಅಭಿನಂದನಾ ಪತ್ರ ಹಾಗೂ ಸಮವಸ್ತ್ರವನ್ನು ನೀಡಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಬಿಇಡಿ ಕಾಲೇಜಿನ ಶಿಕ್ಷಕರನ್ನು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ಚಟುವಟಿಕೆಯಿಂದ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಚರ್ಚಿಸಲಾಯಿತು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಸಾಪ ಸಮ್ಮೇಳನನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಶಾಖೆ ಮುಖ್ಯಸ್ಥ ಭಕ್ತವತ್ಸಲ, ಶಿಕ್ಷಣ ಇಲಾಖೆಯ ವಿಜಯಕುಮಾರ್, ಕಂದಾಯ ಇಲಾಖೆಯ ತಮ್ಮಣ್ಣಗೌಡ ಇತರರಿದ್ದರು.