ಜಿಲ್ಲೆ

ಚಿಕ್ಕನರಗುಂದಕ್ಕೆ ಮೂಲ ಸೌಲಭ್ಯ ಕಲ್ಪಿಸಿ

Gadag

ನರಗುಂದ: ತಾಲೂಕಿನ ದೊಡ್ಡ ಊರು ಎಂದೇ ಖ್ಯಾತಿ ಪಡೆದ ಚಿಕ್ಕನರಗುಂದ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತದೆ ಎಂದು ಗ್ರಾಮ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಗ್ರಾಮಸ್ಥರು ಈ ಕುರಿತು ಗುರುವಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಕಳಸಾ-ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿ, ‘ಚಿಕ್ಕನರಗುಂದ ಗ್ರಾಮಕ್ಕೆ ಪ್ರವೇಶವಾಗುವ ಪ್ರಮುಖ ರಸ್ತೆ ಡಾಂಬರೀಕರಣ ಕಂಡಿಲ್ಲ. ಚರಂಡಿಗಳಿಲ್ಲದೆ ನೀರೆಲ್ಲ ರಸ್ತೆ ಮೇಲೆ ಹರಿದು ಊರು ದುರ್ನಾತ ಬೀರುತ್ತಿದೆ. ರಸ್ತೆ ಬದಿ ಮುಳ್ಳು ಕಂಟಿಗಳು ಬೆಳೆದಿದ್ದು ಜನ ಜಾನುವಾರುಗಳಿಗೆ ತುಂಬಾ ತೊಂದರೆ ಉಂಟಾಗಿದೆ. ಊರಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಅನೈರ್ಮಲ್ಯ ತಾಂಡವವಾಡುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಲವಾರು ಸಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮಸ್ಥರು ಸೇರಿ ಪಂಚಾಯಿತಿ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದರು.

ಡಿ. 4ರಂದು ಗ್ರಾಮಕ್ಕೆ ಜಿಲ್ಲಾಧಿಕಾರಿ, ತಹಸೀಲ್ದಾರ್, ಪೋಲಿಸ್ ಇಲಾಖೆ, ತಾಲೂಕು ಪಂಚಾಯಿತಿ ಇಒ, ಗ್ರಾಪಂ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಚಿಕ್ಕನರಗುಂದದ ಅರ್ಧ ಗ್ರಾಮವೇ ನಮ್ಮ ಆಸ್ತಿಯಾಗಿದೆ ಎಂದು ಗ್ರಾಮದ ಕುಟುಂಬವೊಂದು ಹಲವಾರು ವರ್ಷಗಳಿಂದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತಿದೆ. ಹೀಗಾಗಿ ಗ್ರಾಮವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ತಕರಾರು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಮುಳ್ಳು ಕಂಟಿ ಹಚ್ಚಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಸೋಮು ಹೊಂಗಲ, ರುದ್ರಗೌಡ ರಾಚನಗೌಡ್ರ, ಶಂಕರಗೌಡ ಚನ್ನಪ್ಪಗೌಡ್ರ, ಗೂಳಪ್ಪ ಕಡ್ಲಿಕೊಪ್ಪ, ಮಲ್ಲಪ್ಪ ಆರೆಬೆಂಚಿ, ಬಾಪು ಹಿರೇಗೌಡ್ರ, ಎಸ್.ಕೆ. ಹೂಲಿ, ಪಡಿಯಪ್ಪ ಮರಿಯಣ್ಣವರ, ತಿಪ್ಪಣ್ಣ ಕುರಿ, ಮಾದೇವ ಕಲಹಾಳ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಡಾ.ಶಿವಯೋಗಿ ಹಿರೇಮಠ, ಗೋವಿಂದರಡ್ಡಿ ತಿಮ್ಮರಡ್ಡಿ, ಶಂಕ್ರಪ್ಪ ಯರಗಟ್ಟಿ, ಮುತ್ತು ತೊರಗಲ್ಲ ಇತರರು ಇದ್ದರು.