ಬೇಲೂರು : ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗೆಳ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಕ್ರಮಕೈಗೊಳ್ಳಬೇಕು ಎಂದು ಕರವೇ (ಪ್ರವೀಣ್‌ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ ಹೇಳಿದರು.
ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಸಂಬಂಧ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್‌ರವರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಬೇಲೂರು ಪಟ್ಟಣದಲ್ಲಿ ಪುರಸಭೆಗೆ ಸೇರಿದ 134 ವಾಣಿಜ್ಯ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ಸ್ವಾಗತಾರ್ಹ. ಆದರೆ ಮಳಿಗೆಗಳ ಹರಾಜಿನಲ್ಲಿ ಅವ್ಯವಹಾರ ನಡೆಯುವ ಸಾಧ್ಯತೆ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಆದ್ದರಿಂದ ಪುರಸಭೆ ಮಳಿಗೆಗಳ ಹರಾಜನ್ನು ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆಯಲಾಗಿದೆ. ಇದರ ನಡುವೆಯೂ ಕಾಣದ ಕೈಗಳು ಒಂದು ಮಳಿಗೆಗೆ ಪಡೆಯಲು 6 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಟೆಂಡರ್ ಪ್ರಕ್ರೀಯೆಯಲ್ಲಿ ಅವ್ಯವಹಾರ ನಡೆದರೆ ಸಂಘಟನೆಯಿಂದ ಪತ್ರಿಭಟಿಲಾಗುವುದು. ಈ ಬಗ್ಗೆ ಎಚ್ಚರ ವಹಿಸಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಕ್ರಮಕ್ಕೆ ಮುಂದಾಗಬೇಕು ಎಂದರು.