ಕಾರಟಗಿ: ತಾಲೂಕಿನ ಚೆಳ್ಳೂರು ಗ್ರಾಪಂನಲ್ಲಿ ಭಾರತ ನಿರ್ಮಾಣ ಸೇವಾ ಕೇಂದ್ರದ ಅಕ್ರಮಕ್ಕೆ ಸಂಬಂಧಿಸಿದಂತೆ ಗ್ರಾಪಂನ ಇಬ್ಬರು ಸದಸ್ಯರನ್ನು ಸದಸ್ಯತ್ವಸ್ಥಾನದಿಂದ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌ಆದೇಶಿಸಿದ್ದಾರೆ.
ಗ್ರಾಪಂ ಸದಸ್ಯೆ ರೇಣುಕಾ ಮಹಾದೇವ ಸುಬೇದಾರ, ವಿಜಯಕುಮಾರ ರಾಘವಲು ಅವರ ಸದಸ್ಯತ್ವ ಸ್ಥಾನ ರದ್ದು ಮಾಡಲಾಗಿದೆ. ಭಾರತ ನಿರ್ಮಾಣ ಸೇವಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು ದೂರು ಸಲ್ಲಿಕೆಯಾಗಿತ್ತು. ಅಲ್ಲದೇ, ಸರ್ಕಾರದ ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡಲಾಗಿದ್ದು, ಮೃತರ ಹೆಸರಿನಲ್ಲಿ ಹಾಗೂ ಅರೆ ಸರ್ಕಾರಿ ನೌಕರರ ಹೆಸರಿನಲ್ಲಿ ನರೇಗಾ ಕೂಲಿ ಪಾವತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಕೊಪ್ಪಳ ಜಿಪಂ ಸಿಇಒ ಗ್ರಾಪಂ ಸದಸ್ಯರ ಸ್ಥಾನ ರದ್ದು ಮಾಡುವಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ನಂತರ ವಿಚಾರಣೆ ನಡೆಸಿದ ಕಲಬುರಗಿ ಆರ್.ಸಿ ಅವರು ಸದಸ್ಯತ್ವ ರದ್ದತಿಗೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ವಿಭಾಗೀಯ ಆಯುಕ್ತರ ಶಿಫಾರಸು ಆಧರಿಸಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಇಬ್ಬರನ್ನು ಸದಸ್ಯತ್ವ ಸ್ಥಾನ ರದ್ದು ಮಾಡಿ, ಆದೇಶಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ), 48(4), 48(5) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಗ್ರಾಪಂ ಸದಸ್ಯತ್ವ ಸ್ಥಾನ ರದ್ದು ಮಾಡಿದ್ದಾರೆ. ಇದರ ಜತೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆದೇಶಿದ್ದಾರೆ. ಆದೇಶದಲ್ಲಿ 2023ರಲ್ಲಿ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಸಹ ಉಲ್ಲೇಖಿಸಿದ್ದಾರೆ.