ಮಂಡ್ಯ: ಮನ್‌ಮುಲ್‌ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರು ಜೆಡಿಎಸ್ ಬೆಂಬಲಿತ ನಿರ್ದೇಶಕರನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸೋಮವಾರ ನಗರದ ಸಹಕಾರ ಸಂಘಗಳ ಸಹಾಯಕರ ನಿಬಂಧಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಚೇರಿ ಎದುರು ಜಮಾಯಿಸಿದ ಜೆಡಿಎಸ್ ನಿರ್ದೇಶಕರು ಹಾಗೂ ಕಾರ್ಯಕರ್ತರು, ರಾಜ್ಯಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮನ್‌ಮುಲ್‌ನಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ವಾಮಮಾರ್ಗ ಅನುಸರಿಸಿದೆ. ಜು.6ರಂದು ನಿಗದಿಯಾಗಿದ್ದ ಚುನಾವಣೆಯ ಸಂದರ್ಭದಲ್ಲಿ ಇಬ್ಬರು ನಿರ್ದೇಶಕರನ್ನು ಅನರ್ಹಗೊಳಿಸಿ ನಂತರ ಅದೇ ದಿನ ಸಂಜೆ ವಾಪಸ್ ಪಡೆಯಲಾಗಿತ್ತು. ಸೋಮವಾರ ಕೂಡ ಅದೇ ನಿರ್ದೇಶಕರನ್ನು ಅನರ್ಹಗೊಳಿಸಿ ಕುತಂತ್ರದಿಂದ ಅಧಿಕಾರ ಹಿಡಿದಿದೆ. ಭ್ರಷ್ಟ ಅಧಿಕಾರಿಯನ್ನು ಮುಂದಿಟ್ಟುಕೊಂಡು ಇಬ್ಬರು ನಿರ್ದೇಶಕರನ್ನು ಅನರ್ಹಗೊಳಿಸುವ ಮೂಲಕ ಮನ್‌ಮುಲ್‌ನ ಅಧಿಕಾರ ಹಿಡಿದಿರುವ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ತಡೆದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ವಾಗ್ವಾದ, ತಳ್ಳಾಟ ನೂಕಾಟ ನಡೆಯಿತು.
ಇನ್ನು ಪ್ರತಿಭಟನೆಗೂ ಮುನ್ನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ನುಗ್ಗಿದ ಜೆಡಿಎಸ್ ನಿರ್ದೇಶಕರು ಸಹಾಯಕ ನಿಬಂಧಕರಿಗೆ ತರಾಟೆಗೆ ತೆಗೆದುಕೊಳ್ಳಲು ಯತ್ನಿಸಿದರು. ಆದರೆ ಸಹಾಯಕ ನಿಬಂಧಕ ಕಚೇರಿಯಲ್ಲಿ ಇರಲಿಲ್ಲ. ಇದರಿಂದ ಕೆರಳಿದ ನಿರ್ದೇಶಕರು ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಪ್ರಕಾರ ಕೆಲಸ ಮಾಡುವುದನ್ನು ಬಿಟ್ಟು ಸರ್ಕಾರದ ಕೈಗೊಂಬೆಗಳಾಗಿದ್ದೀರಾ ಎಂದು ಕಿಡಿಕಾರಿದರು. ಅನರ್ಹಗೊಳಿಸಬೇಕಾದರೆ ಒಂದು ತಿಂಗಳ ಹಿಂದೆಯೇ ನೋಟಿಸ್ ನೀಡಬೇಕು. ಅದಕ್ಕೆ ಉತ್ತರ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಏಕಾಏಕಿ ಚುನಾವಣೆ ದಿನವೇ ಅನರ್ಹ ಮಾಡಿರುವುದು ನಿಮ್ಮ ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಶಾಸಕ ಎಚ್.ಟಿ.ಮಂಜು, ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ವಿಶ್ವನಾಥ್, ನೆಲ್ಲಿಗೆರೆ ಬಾಲು, ಕೋಟಿ ರವಿ, ನಗರಸಭೆ ಸದಸ್ಯ ನಾಗೇಶ್, ಬಿ.ಆರ್.ಸುರೇಶ್ ಇತರರಿದ್ದರು.