ಜಿಲ್ಲೆ

ಉದ್ದಿಮೆದಾರರಿಗೂ ಜಿಎಸ್‌ಟಿ ಮಂಡಳಿಯಲ್ಲಿ ಸದಸ್ಯತ್ವ ನೀಡಲಿ

ಮೈಸೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸದಸ್ಯತ್ವವನ್ನು ಉದ್ದಿಮೆ ಕ್ಷೇತ್ರಕ್ಕೂ ನೀಡಬೇಕೆಂದು ಉದ್ಯಮಿ ಸುಧಾಕರ್ ಎಸ್.ಶೆಟ್ಟಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.


ಆಲ್ ಇಂಡಿಯಾ ಫೆಡರೇಷನ್ ಆಫ್ ಟ್ಯಾಕ್ಸ್ ಪ್ರಾಕ್ಟಿಷನರ್ಸ್ ಅಸೋಸಿಯೇಷನ್ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಮಾತನಾಡಿದರು.


ಜಿಎಸ್‌ಟಿ ಮಂಡಳಿಯಲ್ಲಿ ತೆರಿಗೆದಾರರಿಗೆ ಸದಸ್ಯತ್ವ ಇಲ್ಲದೆ ಇರುವುದು ದುರಾದೃಷ್ಟಕರ. ಹಿಂದೆ ಜಿಎಸ್‌ಟಿ ಬೃಹತ್ ಉದ್ಯಮಗಳಲ್ಲಿತ್ತು. ಇವತ್ತು ಸಾಧಾರಣ ಉದ್ಯಮಿಯೂ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವುದು ತನ್ನ ಇರುವಿಕೆಯನ್ನು ತೋರಿಸುತ್ತದೆ ಎಂದರು.


ಆದಾಯ ತೆರಿಗೆ, ಜಿಎಸ್‌ಟಿ ಕುರಿತು ಉದ್ದಿಮೆದಾರರಲ್ಲಿ ಭಯ ಇದೆ. ಇದನ್ನು ಬ್ರಹ್ಮಾಂಡವಾಗಿ ತೋರಿಸಿದಾಗ ವ್ಯಾಪಾರೋದ್ಯಮಿಗಳು ಆದಾಯ ತೆರಿಗೆ, ಜಿಎಸ್‌ಟಿಯಿಂದ ದೂರ ಉಳಿಯುತ್ತಾರೆ. ಆದಾಯ ತೆರಿಗೆ ಕುರಿತು ಸಣ್ಣ ಉದ್ಯಮಗಳಿಗೆ ಭಯ ಉಂಟು ಮಾಡದೆ ಮಾರ್ಗದರ್ಶನ ಮಾಡಬೇಕು ಎಂದರು.


ಈಗಿನ ಕಾಲ ಸಂಘ-ಸಂಸ್ಥೆಗಳ ಯುಗ. ಒಬ್ಬ ವ್ಯಕ್ತಿ ಸಾಧಿಸಲಾಗದೆ ಇರೋದನ್ನು ಸಂಘಗಳ ಮುಖಾಂತರ ಸಾಧಿಸಬಹುದು. ಆಗ ಸಂಘಗಳ ಮಾತನ್ನು ಸರ್ಕಾರ ಆಲಿಸುತ್ತದೆ. ಆದ್ದರಿಂದ ಎಲ್ಲ ಸದಸ್ಯರು ಸಂಘ-ಸಂಸ್ಥೆಗಳ ಮುಖಾಂತರ ಒಟ್ಟಾಗಿ ಹೋರಾಟ ಮಾಡಿದರೆ ಮಾತ್ರ ನಿಮ್ಮಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.


ಉದ್ಯಮಿಗಳಾದ ಕೋಲ್ಕತಾದ ನಾರಾಯಣ ಪ್ರಸಾದ್ ಜೈನ್, ನಂಜುಂಡ ಪ್ರಸಾದ್, ಸಮ್ಮೇಳನದ ಅಧ್ಯಕ್ಷ ಮುಕುಂದ್ ಪಾಂಟ್ನಿಸ್, ರಾಮರಾಜ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಲಿಂಗರಾಜ್, ಕೆಎಸ್‌ಡಿಪಿಎ ಅಧ್ಯಕ್ಷ ನಂಜುಂಡ ಪ್ರಸಾದ್ ಇದ್ದರು.