ಕುಶಾಲನಗರ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯು ಸಂಘದ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಆ.೧೦ ರಿಂದ ವಿಧಾನಸಭಾ ಮಳೆಗಾಲದ ಅಧಿವೇಶನ ಪ್ರಾರಂಭಗೊಳ್ಳುವುದರಿಂದ ಶಾಲೆಯ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
೨೦೨೫ ಆ.೧೫ ಶುಕ್ರವಾರದಂದು ಸಂಜೆ ೪:೩೦ ಘಂಟೆಗೆ ನಮ್ಮ ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಜಿಎಂಪಿ ಶಾಲಾ ಆವರಣದಲ್ಲಿ ಸಂಘದ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಸಂಘದ ಖಜಾಂಜಿ ಎಸ್.ಕೆ.ಸತೀಶ್ ಲೆಕ್ಕ ಪತ್ರ ಮಂಡನೆ ಮಾಡಿದರು. ಸಂಘದ ಲೋಗೋವನ್ನು ಅಂತಿಮಗೊಳಿಸಿ ಸದಸ್ಯತ್ವ ನೊಂದಣಿ ಅರ್ಜಿ ಹಾಗೂ ಇನ್ನು ಮುಂತಾದ ಮುದ್ರಣ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸಂಘದ ಸಹಕಾರ್ಯದರ್ಶಿ ಕೆ.ಎನ್.ದೇವರಾಜ್‌ಗೆ ಸಭೆಯಲ್ಲಿ ಅಭಿನಂದಿಸಲಾಯಿತು.
ಶತಮಾನೋತ್ಸವದ ಕಟ್ಟಡ ನಿರ್ಮಾಣ ಮಾಡುವ ಸ್ಥಳದಲ್ಲಿರುವ ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸಲು ಇಲಾಖೆಯಿಂದ ಅನುಮತಿ ಪಡೆಯಲು ಶ್ರಮಿಸಿದ ಸಂಘದ ಕಾರ್ಯದರ್ಶಿ ಎಂ.ಇ.ಮೊಹಿದ್ದೀನ್ ರವರಿಗೆ ಸಭೆಯಲ್ಲಿ ಅಭಿನಂದಿಸಿ ನಿರ್ಣಯ ಕೈಗೊಳ್ಳಲಾಯಿತು. ಸಂಘದ ಮುಂದಿನ ಕಾರ್ಯಯೋಜನೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ನಮ್ಮ ಶಾಲೆಯ ಬಗ್ಗೆ ಒಂದು ಕಿರು ಚಿತ್ರ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಸಂಘದ ಉಪಾಧ್ಯಕ್ಷರಾದ ಎಂ.ವಿ.ನಾರಾಯಣ ಸ್ವಾಗತಿಸಿದರೆ, ಸಂಘದ ಕಾರ್ಯದರ್ಶಿ ಎಂ.ಇ.ಮೊಹಿದ್ದೀನ್ ವಂದಿಸಿದರು.