ಜಿಲ್ಲೆ

ಸದಸ್ಯರ ಹಣ ಕಂಪನಿಗೆ ತುಂಬದೆ 10.47 ಲಕ್ಷ ರೂ. ಮೋಸ

ರಾಣೆಬೆನ್ನೂರ: ಗ್ರಾಹಕರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಆಮಿಷವೊಡ್ಡಿ ಅವರಿಂದ ಪಡೆದ 10.47 ಲಕ್ಷ ರೂ. ಹಣವನ್ನು ಕಂಪನಿಗೆ ಕಟ್ಟದೆ ಮೋಸ ಮಾಡಿರುವ ಕುರಿತು ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಹಿರೇಕೆರೂರ ತಾಲೂಕಿನ ಚಿಕ್ಕೇರೂರ ಗ್ರಾಮದ ನಿವಾಸಿ ಹಾಗೂ ನಗರದ ಸ್ಯಾಟಿನ್​ ಕ್ರೇಡಿಟ ಕೇರ್​ ನೆಟವರ್ಕ ಲಿಮಿಟೆಡ್​ನ ಶಾಖಾ ವ್ಯವಸ್ಥಾಪಕ ಮೋಹನರಾಜ ನಾಗರಾಜಪ್ಪ ಕಿಳ್ಳಿಕ್ಯಾತರ (28) ಮೋಸ ಮಾಡಿರುವ ಆರೋಪಿ.
ಈತನ ವಿರುದ್ಧ ಕಂಪನಿಯ ರಿಜಿನಲ್​ ಮ್ಯಾನೇಜರ್​ ಚೌಡಪ್ಪ ಶರಣಪ್ಪ ಎಂಬುವರು ದೂರು ನೀಡಿದ್ದಾರೆ. ಆರೋಪಿಯು ಕಂಪನಿಯಿಂದ ಸಾಲ ಪಡೆದ ಸದಸ್ಯರಿಗೆ ಹೆಚ್ಚಿನ ಸಾಲ ಕೊಡುವ ನೆಪ ಹೇಳಿ 10.47 ಲಕ್ಷ ರೂ. ವಸೂಲಿ ಮಾಡಿಕೊಂಡು ಅದನ್ನು ಕಂಪನಿಗೆ ತುಂಬದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.