ಎಂಎಡಿಬಿ ಕಚೇರಿಯಲ್ಲಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿದರು. ಬೇಳೂರು ಗೋಪಾಲಕೃಷ್ಣ, ಸಿ.ಎಸ್.ಗಾಯತ್ರಿ ಇದ್ದರು. 
ಜಿಲ್ಲೆ

ಸಿಎಂ ಸಮ್ಮುಖದಲ್ಲಿ ಸದಸ್ಯರ ಸಭೆ: ಮಂಜುನಾಥಗೌಡ

ಶಿವಮೊಗ್ಗ: ಪ್ರಸಕ್ತ ಸಾಲಿನ ಎಲ್ಲ ಯೋಜನೆಗಳನ್ನು 2025ರ ಮಾರ್ಚ್‌ನೊಳಗೆ ಮುಕ್ತಾಯಗೊಳಿಸಬೇಕಿದೆ. ಅದಕ್ಕೆ ಎಲ್ಲ ಶಾಸಕರು, ಎಂಎಲ್‌ಸಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಎಂಎಡಿಬಿ(ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ) ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮನವಿ ಮಾಡಿದರು.

ಸಾಗರ ರಸ್ತೆಯ ಎಂಎಡಿಬಿ ಕಚೇರಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಧ್ಯಕ್ಷನಾದ ಬಳಿಕ ಮೊದಲ ಸಭೆ ಇದಾಗಿದೆ. ಈ ಬಾರಿ ನಬಾರ್ಡ್‌ನಿಂದ ಸಾಲ ಪಡೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದರು. ದೂರದ ಜಿಲ್ಲೆಗಳಿಂದ ಸಾಮಾನ್ಯ ಸಭೆಗೆ ಬರುವುದಕ್ಕೆ ಕೆಲ ಜನಪ್ರತಿನಿಧಿಗಳಿಗೆ ಸಮಸ್ಯೆಯಾಗುತ್ತಿದೆ. ಆ ಕಾರಣಕ್ಕೆ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ಮಂಡಳಿಯ ಎಲ್ಲ ಸದಸ್ಯರ ಸಭೆ ನಡೆಸಿ ಯೋಜನೆಗಳ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಂಡಳಿ ಯೋಜನೆಗಳಿಗೆ ಕ್ಲಾರಿಟಿ ಇಲ್ಲ: ಮಂಡಳಿ ಯೋಜನೆಗಳಿಗೆ ಯಾವುದೇ ಕ್ಲಾರಿಟಿ ಇಲ್ಲ. ಹಿಂದಿನ ಯೋಜನೆಗಳಿಗೆ ಕಾಲಮಿತಿ ಇಲ್ಲ. ಹಾಗಾದರೆ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಎಂಎಲ್‌ಸಿ ಮಂಜುನಾಥ ಭಂಡಾರಿ ಹೇಳಿದರು. ಕಾಮಗಾರಿಗಳು ವಿಳಂಬ ಆದಷ್ಟೂ ಉತ್ಪನ್ನಗಳ ವೆಚ್ಚ ಹೆಚ್ಚಾಗಲಿದೆ. ಮಂಡಳಿಗೆ ಅನುದಾನ ಹೆಚ್ಚಿಸುವ ಅಧಿಕಾರವೂ ಇಲ್ಲ. ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕೆಲಸ ಮುಗಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾಲಮಿತಿ ನೀಡುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದರು. ಇದಕ್ಕೆ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಜಿ.ಶಾಂತನಗೌಡ ಧ್ವನಿಗೂಡಿಸಿದರು.

ವಾಕಿಂಗ್ ಪಾತ್ ನಿರ್ಮಾಣಕ್ಕೆ ಆಕ್ಷೇಪ
ಮಂಡಳಿ ಹಿಂಭಾಗವೇ ಸದಸ್ಯರ ಅನುಮತಿ ಪಡೆಯದೇ 13 ಲಕ್ಷ ರೂ. ವೆಚ್ಚದಲ್ಲಿ ವಾಕಿಂಗ್ ಪಾತ್ ನಿರ್ಮಾಣ ಮಾಡಲಾಗಿದೆ. ಇದು ಮಂಡಳಿಯ ಕಾಯ್ದೆಯಲ್ಲಿ ಅವಕಾಶವಿದೆಯಾ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಪ್ರಶ್ನಿಸಿದರು. ಸಾರ್ವಜನಿಕ ಬಳಕೆಗೆ ಅವಕಾಶವಿದ್ದರೆ ಆಕ್ಷೇಪವಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಮಂಡಳಿ ಸದಸ್ಯರಿಗೆ, ಅಧಿಕಾರಿಗಳಿಗೆ ವಾಕಿಂಗ್ ಪಾತ್ ಮಾಡಿಸುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥಗೌಡ, ಸಚಿವ ಡಿ.ಸುಧಾಕರ್ ಅವರು ಅಧಿಕಾರ ವಹಿಸಿಕೊಂಡಿದ್ದಾಗ ನಿರ್ಮಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

124 ಕಾಮಗಾರಿಗಳು ರದ್ದು
13 ಜಿಲ್ಲೆಗಳ ವ್ಯಾಪ್ತಿಯಲ್ಲಿ 124 ಕಾಮಗಾರಿಗಳು ರದ್ದಾಗಿವೆ ಎಂದು ಕಾರ್ಯದರ್ಶಿ ಗಾಯತ್ರಿ ಸಭೆ ಗಮನಕ್ಕೆ ತಂದರು. ಶಾಸಕ ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನೂರಾರು ಕಾಮಗಾರಿಗಳು ರದ್ದಾಗಿವೆ. ಇದು ಎಂಎಡಿಬಿಗೆ ಮಾಡಿದ ಅವಮಾನ. ಕಾಮಗಾರಿಗಳನ್ನು ರದ್ದು ಮಾಡಿ ಅನುದಾನ ಹಿಂಪಡೆಯುವ ಶೋಚನೀಯ ಸ್ಥಿತಿಗೆ ಸರ್ಕಾರ ಬಂದಿದೆ. ತಕ್ಷಣವೇ ಅನುದಾನ ಬಿಡುಗಡೆ ಮಾಡಿ ರದ್ದಾಗಿರುವ ಎಲ್ಲ ಕಾಮಗಾರಿಗಳನ್ನು ಶುರು ಮಾಡಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗ ನಗರದ ಶಾಲಾ ಕಾಲೇಜುಗಳ ದುರಸ್ತಿ, ಮೂಲಸೌಕರ್ಯಕ್ಕೆ, ನೆಹರು ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ಘಟಕ ಗ್ಯಾಲರಿಯ ಮೇಲ್ಛಾವಣಿ, ಹೈ ಮಾಸ್ಟ್ ಅಳವಡಿಕೆ ಹಾಗೂ ಪಶು ವೈದ್ಯಕೀಯ ಕಾಲೇಜಿನಲ್ಲಿ ಕ್ರೀಡಾಂಗಣಕ್ಕೆ ಹೈ ಮಾಸ್ಟ್ ಅಳವಡಿಕೆಗೆ ಅನುದಾನ ನೀಡುವಂತೆ ಮನವಿ ಮಾಡಿದರು.