ಹನೂರಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಸಮಿತಿ ಅಧ್ಯಕ್ಷ ರಾಚಯ್ಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉದ್ದನೂರು ಸಿದ್ದರಾಜು, ಉಮೇಶ್, ರಂಗಸ್ವಾಮಿ, ಜಯಶೀಲ ಇತರರು ಇದ್ದರು.  
ಜಿಲ್ಲೆ

ಗ್ಯಾರಂಟಿ ಸಮರ್ಪಕ ಅನುಷ್ಠಾನಕ್ಕೆ ಸದಸ್ಯರ ಒತ್ತಾಯ

ಲೋಕೇಶ್ ಮನು. ಡಿ

ಹನೂರು: ತಾಲೂಕಿನಲ್ಲಿ ಉದ್ಯೋಗ ಮೇಳ ಆಯೋಜಿಸಬೇಕು. ಹನೂರಿನಿಂದ ಮಹದೇಶ್ವರ ಬೆಟ್ಟ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಬಸ್ ಸೌಕರ್ಯ ಒದಗಿಸಬೇಕು. ಸರಿಯಾಗಿ ಪಡಿತರ ವಿತರಣೆಯಾಗಬೇಕು. ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು.

ಇದು ಹನೂರಿನ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಿತಿ ಸದಸ್ಯರಿಂದ ಕೇಳಿಬಂದ ಪ್ರಮುಖ ಒತ್ತಾಯ.

ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ ಮಾತನಾಡಿ, ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಿದ್ದಾರೆ. ಆದರೆ ಸರ್ಕಾರದ ಯುವನಿಧಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದು ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಅಲ್ಲದೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಆದರೆ ಹನೂರಿನಲ್ಲಿ ಆಯೋಜಿಸದಿರುವುದು ನಿಜಕ್ಕೂ ವಿಪರ್ಯಾಸ. ಆದ್ದರಿಂದ ಜನರಿಗೆ ಮಾಹಿತಿ ತಿಳಿಸಿ ತಾಲೂಕಿನಲ್ಲಿ ಉದ್ಯೋಗ ಮೇಳ ಆಯೋಜಿಸಬೇಕು. ಇದರಿಂದ ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಉದ್ಯೋಗ ವಿನಿಮಯ ಕಚೇರಿಯ ನೌಕರ ಯಶವಂತ್ ಅವರಿಗೆ ಸೂಚಿಸಿದರು.

ಸಮಿತಿ ಸದಸ್ಯ, ಗಿರಿಜನ ಮುಖಂಡ ಮಹದೇವ ಮಾತನಾಡಿ, ತಾಲೂಕಿನ ಗಿರಿಜನ ಹಾಡಿಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪದವಿ ಪಡೆದ ವಿದ್ಯಾರ್ಥಿಗಳಿದ್ದಾರೆ. ಆದರೆ ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ಕೊರತೆಯಿಂದ ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ಬಸ್ ಸೌಕರ್ಯ ಒದಗಿಸಿ: ಸಮಿಯ ಜಿಲ್ಲಾ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು ಮಾತನಾಡಿ, ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ. ಇಲ್ಲಿಗೆ ತಾಲೂಕಿನಿಂದ ಹೆಚ್ಚಿನ ಭಕ್ತರು ತೆರಳುತ್ತಾರೆ. ಆದರೆ ಹನೂರಿನಿಂದ ಮ.ಬೆಟ್ಟಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಕೊಳ್ಳೇಗಾಲದಿಂದ ಬರುವ ಬಸ್ಸಿನಲ್ಲಿ ಈ ಭಾಗದ ಭಕ್ತರು ನೂಕುನುಗ್ಗಲಿನಲ್ಲಿ ತೆರಳುತ್ತಿದ್ದಾರೆ. ಆದ್ದರಿಂದ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸುವಂತೆ ಸಾರಿಗೆ ಇಲಾಖೆಯ ಸಂಚಾರ ನಿಯಂತ್ರಕ ರಂಗಸ್ವಾಮಿ ಅವರಿಗೆ ಸೂಚಿಸಿದರು.

ಕೆಲ ಸಮಿತಿ ಸದಸ್ಯರು ಮಾತನಾಡಿ, ಗಂಗನದೊಡ್ಡಿ ಅಜ್ಜೀಪುರ ಮಾರ್ಗವಾಗಿ ಮಧ್ಯಾಹ್ನ ವೇಳೆ ಬಸ್ ಬಿಡಬೇಕು. ಪೊನ್ನಾಚಿ, ದಂಟಳ್ಳಿ, ಹೂಗ್ಯಂ, ಚಿಕ್ಕಲ್ಲೂರು, ತೆಳ್ಳನೂರು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು.

ಕಚೇರಿ ತೆರೆಯಿರಿ: ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗೆ ಕಚೇರಿ ತೆರೆಯಲಾಗಿದೆ. ಆದರೆ ಹನೂರಿನಲ್ಲಿ ಕಚೇರಿ ಇಲ್ಲ. ಇದರಿಂದ ಸಭೆ ನಡೆಸಲು, ಚರ್ಚಿಸಲು ತೊಂದರೆಯಾಗಿದೆ. ಆದ್ದರಿಂದ ಹನೂರಿನಲ್ಲಿ ಕಚೇರಿ ತೆರೆಯಬೇಕು ಎಂದು ಸಮಿತಿ ಸದಸ್ಯರು ಮನವಿ ಮಾಡಿದರು. ಇದಕ್ಕೆ ತಾಪಂ ಇಒ ಉಮೇಶ್ ಪ್ರತಿಕ್ರಿಯಿಸಿ, ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದಸ್ಯದಲ್ಲಿಯೇ ಕಚೇರಿ ತೆರೆಯುವುದಾಗಿ ಭರವಸೆ ನೀಡಿದರು.

ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಸಂಬಂಧ ಅಧಿಕಾರಿಗಳಿಂದ ಅನುಪಾಲನಾ ವರದಿ ಪಡೆದು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಇದೇ ವೇಳೆ ಸೂಚಿಸಲಾಯಿತು.

ಸೆಸ್ಕ್ ಎಇಇ ರಂಗಸ್ವಾಮಿ, ಸಿಡಿಪಿಒ ಜಯಶೀಲಾ, ಆಹಾರ ಶಿರಸ್ತೇದಾರ್ ವಿಶ್ವನಾಥ್ ಹಾಗೂ ಸಮಿತಿ ಸದಸ್ಯರು ಇದ್ದರು.

a