ಮಡಿಕೇರಿ:
ಮಡಿಕೇರಿ ನಗರಸಭೆ ಪೌರಾಯುಕ್ತರ ಮೇಲೆ ಪಕ್ಷಾತೀತವಾಗಿ ಮುಗಿಬಿದ್ದ ಸದಸ್ಯರು. ನಗರಸಭೆ ಆಡಳಿತ ಮಂಡಳಿಗೆ ಕಳಂಕ ತರಲು ಪೌರಾಯುಕ್ತರ ಸಂಚು ಆರೋಪ. ಈ ಕೂಡಲೇ ವರ್ಗಾವಣೆ ತೆಗೆದುಕೊಳ್ಳುವಂತೆ ಒತ್ತಾಯ. ತಾನು ತಪ್ಪು ಮಾಡಿದ್ದರೆ ಮರಣದಂಡನೆ ಶಿಕ್ಷೆಗೂ ಸಿದ್ಧ ಎಂದು ಭಾವುಕರಾದ ಪೌರಾಯುಕ್ತ ವಿಜಯ್…ಇದು ಗುರುವಾರ ನಡೆದ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯ ಪ್ರಮುಖಾಂಶಗಳು.ಸಭೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಎಸ್‌ಡಿಪಿಐನ ಅಮೀನ್ ಮೊಹಿಸಿನ್, ಕನಿಷ್ಠ ತಿಂಗಳಿಗೊಂದಾದರೂ ಸಾಮಾನ್ಯ ಸಭೆಗಳು ನಡೆಯಬೇಕು. ಆದರೆ ಇಲ್ಲಿ ಮೂರು ತಿಂಗಳ ನಂತರ ಸಭೆ ಕರೆಯಲಾಗಿದೆ. ಹೀಗಾದರೆ ಸಮಸ್ಯೆಗಳ ಚರ್ಚೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸಾಮಾನ್ಯ ಸಭೆಗಳಲ್ಲಿ ಜಮಾ - ಖರ್ಚು ಕೊಡಬೇಕು. ನಗರಸಭೆಯಲ್ಲಿ ಅಕೌಟೆಂಟ್ ಸೇರಿದಂತೆ ಸಿಬ್ಬಂದಿ ಕೊರತೆ ಇರುವ ಕಾರಣ ನಿಯಮಿತವಾಗಿ ಸಭೆ ಕರೆಯಲು ಆಗುತ್ತಿಲ್ಲ ಎಂದರು.
ಬಿಜೆಪಿಯ ಅಪ್ಪಣ್ಣ ಮಾತನಾಡಿ, ಸಿಬ್ಬಂದಿ ಕೊರತೆ ಬರೀ ನೆಪ ಮಾತ್ರ. ಮಡಿಕೇರಿ ವ್ಯಾಪ್ತಿಯಲ್ಲಿ ಇರುವ ೩೦ ಸಾವಿರ ಜನಸಂಖ್ಯೆಗೆ ೬೪ ಸಿಬ್ಬಂದಿಯಿಂದ ಕೆಲಸ ಆರಾಮವಾಗಿ ಮಾಡಿಸಬಹುದು. ಆದರೆ ಯಾರೂ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಉಮೇಶ್, ಸಾರ್ವಜನಿಕರಿಗೆ ಬೇಕು ಅಂತನೇ ಕಿರಿಕಿರಿ ಮಾಡುವಂತಿದೆ. ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರಲು ಹುನ್ನಾರ ಮಾಡಿದಂತಿದೆ. ಸಭೆಯಲ್ಲಿ ಆದ ಯಾವುದೇ ತೀರ್ಮಾನಗಳ ಫಾಲೋಅಪ್ ಅಗುತ್ತಿಲ್ಲ. ಅಧಿಕಾರಿಗಳು ಕೆಲಸ ಮಾಡದಿದ್ದರೆ ಬೈಯ್ಯುವುದು ಸದಸ್ಯರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಅರುಣ್ ಶೆಟ್ಟಿ ಮಾತನಾಡಿ, ಸಾರ್ವಜನಿಕರಿಗೆ ಆಗಬೇಕಾಗಿರುವ ಕೆಲಸ ಆಗುತ್ತಿಲ್ಲ. ನಗರಸಭೆಯ ಎಲ್ಲಾ ಲೋಪಗಳಿಗೂ ಕಮೀ?ನರ್ ಅವರೇ ಕಾರಣ. ಒಂದು ಕಡೆ ಸಿಬ್ಬಂದಿ ಕೊರತೆ ಅಂದುಕೊಂಡೇ ವಿನಾ ಕಾರಣ ತಾವು ರಜೆ ಮಾಡುವುದರ ಜತೆಗೆ ಸಿಬ್ಬಂದಿಗೂ ರಜೆ ಕೊಡುತ್ತಾರೆ. ಇಂಥ ಕಮೀಷನರ್ ನಮಗೆ ಬೇಡ. ಇಲ್ಲಿಂದ ಹೊರಟು ಹೋಗಿ ಎಂದರು.
ಬಿಜೆಪಿಯ ಮಹೇಶ್ ಜೈನಿ ಮಾತನಾಡಿ, ಸದಸ್ಯರು ಹೇಳಿದ ಕೆಲಸ ಮಾಡಬಾರದು ಎಂದು ಸಿಬ್ಬಂದಿಗೆ ಕಮೀಷನರ್ ಸೂಚನೆ ಕೊಟ್ಟಿದ್ದಾರೆ. ಈ ಮೂಲಕ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಮಧ್ಯೆ ಕಂದಕ ನಿರ್ಮಾಣ ಮಾಡಲಾಗಿದೆ. ಚೆನ್ನಾಗಿ ಹೋಗಬೇಕಾದ ಆಡಳಿತ ವ್ಯವಸ್ಥೆಯನ್ನು ಕಮೀ?ನರ್ ಹಾಳು ಮಾಡಿದ್ದಾರೆ. ಇದರಿಂದ ನಗರಸಭೆಗೆ ಬೀಗ ಹಾಕುವುದೇ ಉತ್ತಮ ಎಂದರು.
ಬಿಜೆಪಿಯ ರಮೇಶ್ ಮಾತನಾಡಿ ಆಡಳಿತ ನಡೆಸುವವರಿಗೆ ಕಪ್ಪುಚುಕ್ಕೆ ಬರುವಂಥ ಕೆಲಸ ಕಮೀಷನರ್ ಮಾಡುತ್ತಿದ್ದಾರೆ. ತೆರಿಗೆ ಹಣದಿಂದ ತೆಗೆದುಕೊಳ್ಳುವ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡಿ. ಇಲ್ಲದಿದ್ದರೆ ಸಾರ್ವಜನಿಕರ ಶಾಪ ತಟ್ಟುವುದು ಖಚಿತ. ಮೊದಲೆಲ್ಲಾ ಸಿಬ್ಬಂದಿ ಇಲ್ಲದಿದ್ದರೂ ಕೆಲಸಗಳು ನಡೆಯುತ್ತಿದ್ದವು. ಎಲ್ಲದಕ್ಕೂ ಮನಸ್ಸು ಬೇಕು ಅ?್ಟೇ. ಈ ಕಮೀಷನರ್ ಆರಂಭದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಂತರ ಏನಾಯ್ತೋ ಗೊತ್ತಿಲ್ಲ. ಇನ್ನು ಮಂದೆಯಾದರೂ ಕಮೀ?ನರ್ ಮನಸ್ಸು ಬದಲಿಸಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಅವರ ವರ್ಗಾವಣೆಗೆ ನಿರ್ಣಯ ತೆಗೆದುಕೊಳ್ಳಬೇಕಾಗಬಹುದು ಎಂದು ಎಚ್ಚರಿಸಿದರು.
ತಮ್ಮ ಮೇಲಿನ ಆರೋಪಗಳನ್ನೆಲ್ಲಾ ಮೌನವಾಗಿ ಆಲಿಸಿದ ಪೌರಾಯುಕ್ತ ವಿಜಯ್, ತಾವು ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಸಿಬ್ಬಂದಿ ಮತ್ತು ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದ್ದು ನಮ್ಮ ಶಕ್ತಿ ಕಡಿಮೆ ಆಗಿರುವುದರಿಂದ ಹೀಗಾಗಿದೆ. ಸಿಬ್ಬಂದಿ ಮತ್ತು ಸದಸ್ಯರ ಮಧ್ಯೆ ಬಿರುಕು ಮೂಡಿಸುವ ಕೆಲಸ ಮಾಡಿಲ್ಲ. ಇಂಥ ತಪ್ಪು ಮಾಡಿದ್ದರೆ ಮರಣದಂಡನೆ ಶಿಕ್ಷೆ ಎದುರಿಸಲೂ ಸಿದ್ಧ ಎಂದು ಭಾವುಕರಾಗಿ ಹೇಳಿದರು.
ಅಮೀನ್ ಮೊಹಿಸೀನ್ ಈ ಸಭೆಯಲ್ಲಿ ಅಧ್ಯಕ್ಷರಿಗೆ ಬುದ್ಧಿ ಹೇಳಿ ತಿದ್ದುವ ಕೆಲಸ ಮಾಡಿದರು. ಆಡಳಿತ ನಡೆಸಲು ಛಲ ಬೇಕು. ಆದರೆ ಅಧ್ಯಕ್ಷರು ಸಂಪೂರ್ಣ ವಿಫಲರಾಗಿದ್ದಾರೆ. ಕಮೀ?ನರ್ ಕೆಲಸ ಮಾಡದಿದ್ದರೆ ಅಧ್ಯಕ್ಷರು ಮಾಡಿಸಬೇಕು. ಅಧ್ಯಕ್ಷರು ತಮ್ಮ ಅಧಿಕಾರವನ್ನು ವ್ಯರ್ಥ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಸಹಕಾರ ಕೊಟ್ಟರೂ ಪ್ರಯೋಜನ ಆಗಿಲ್ಲ. ಸಿಕ್ಕಿರುವ ಅಧಿಕಾರ ಬಳಸಿಕೊಳ್ಳಿ. ಸಮಸ್ಯೆ ಪರಿಹರಿಸದಿದ್ದರೆ ಪರಿಸ್ಥಿತಿ ಹದಗೆಡುತ್ತದೆ. ನಗರಸಭೆಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಗಂಭೀರವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ನಗರದಲ್ಲಿ ಬೀದಿ ನಾಯಿ ಹಾವಳಿ ಮಿತಿಮೀರಿರುವ ಬಗ್ಗೆ ಸದಸ್ಯ ರಮೇಶ್ ಪ್ರಸ್ತಾಪಿಸಿದರು. ಬೀದಿ ನಾಯಿಗಳನ್ನು ಹಿಡಿದು ಕೊಲ್ಲಲು ಪ್ರಾಣಿ ದಯಾ ಸಂಘದ ವಿರೋಧ ಇದೆ. ಇವುಗಳ ಸಂತಾನಹರಣ ಶಕ್ತಿಯ ಶಸ್ತ್ರ ಚಿಕಿತ್ಸೆ ಮಾಡಲು ಒಂದು ನಾಯಿಗೆ ೧,೭೦೦ ರೂ. ಬೇಕಾಗುತ್ತದೆ. ಇದರ ಬದಲು ಬೀದಿ ನಾಯಿಗಳನ್ನೆಲ್ಲಾ ಹಿಡಿದು ಒಂದೆಡೆ ಕೂಡಿ ಹಾಕಿ ನಗರಸಭೆ ವತಿಯಿಂದಲೇ ಸಾಕುವ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಈ ಸಂದರ್ಭ ಮಾತನಾಡಿದ ಎಸ್‌ಡಿಪಿಐನ ಮನ್ಸೂರ್, ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಾಡು ಹಂದಿ ಮತ್ತು ಮುಳ್ಳುಹಂದಿ ಹಾವಳಿ ಹೆಚ್ಚಾಗಿದ್ದು, ಅಪಾಯ ಸಂಭವಿಸುವ ಮೊದಲು ಇದನ್ನು ನಿಯಂತ್ರಿಸಲು ಅರಣ್ಯ ಇಲಾಖೆಗೆ ಮನವಿ ಮಾಡುವಂತೆ ಹೇಳಿದರು.
ಫಾರಂ ನಂ.೩ ಮತ್ತು ಟ್ರೇಡ್ ಲೈಸೆನ್ಸ್ ಕೊಡುವಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಫಾರಂ ನಂ.೩ ಕೊಡುವಲ್ಲಿ ಸಿಬ್ಬಂದಿ ವಿನಾ ಕಾರಣ ಅಲೆದಾಡಿಸುತ್ತಾರೆ. ಇದರ ಅನುಭವ ತಮಗೂ ಆಗಿದೆ ಎಂದು ಸದಸ್ಯೆ ಶ್ವೇತಾ ಪ್ರಶಾಂತ್ ಹೇಳಿದರು. ಫಾರಂ೩ ನೀಡುವಲ್ಲಿ ಸರಳೀಕರಣ ಮಾಡಬೇಕು ಎಂದು ಸದಸ್ಯ ರಮೇಶ್ ಸಲಹೆ ನೀಡಿದರು. ಇದಕ್ಕೆ ಸದಸ್ಯರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದರು.
ಎಸ್‌ಸಿ - ಎಸ್‌ಟಿ ನಿಧಿ ದುರ್ಬಳಕೆ ಆಗುತ್ತಿರುವ ಬಗ್ಗೆ ಪ್ರತಿಪಕ್ಷ ಸದಸ್ಯ ಮನ್ಸೂರ್, ಬಷೀರ್ ಆರೋಪಕ್ಕೆ ಆಡಳಿತ ಪಕ್ಷದ ಶ್ವೇತಾ ಪ್ರಶಾಂತ್ ಧ್ವನಿಗೂಡಿಸಿದರು. ನಗರಸಭೆಗೆ ಬರುವ ವಿವಿಧ ನಿಧಿಗಳು, ಅವುಗಳ ಹಂಚಿಕೆ ಬಗ್ಗೆ ಸದಸ್ಯರಿಗೆ ಮಾಹಿತಿ ಕೊಡುವುದಿಲ್ಲ ಎಂದು ಅಮೀನ್ ಮೊಹಿಸೀನ್ ಆರೋಪಿಸಿದರು. ಎಸ್‌ಸಿ - ಎಸ್‌ಟಿ ನಿಧಿ ದುರ್ಬಳಕೆ ಆಗಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ಶ್ವೇತಾ ಪ್ರಶಾಂತ್ ಹೇಳಿದರು.
ನಗರಸಭೆಯಲ್ಲಿ ಬಳಸುವ ವಾಹನಗಳಿಗೆ ಟೆಂಡರ್ ಮಾಡುತ್ತಿಲ್ಲ. ಹಳೆಬರನ್ನೇ ಮುಂದುವರಿಸಲಾಗಿದೆ ಎಂದ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಮಾರುಕಟ್ಟೆ ಸುಂಕ ಸಂಗ್ರಹದ ಟೆಂಡರ್ ಆಗಿದ್ದರೂ ಟೆಂಡರ್ ಕರೆದವರಿಗೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಆದರೂ ಅವರು ಸುಂಕ ಸಂಗ್ರಹಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನ ರಾಜೇಶ್ ಮಾತನಾಡಿ, ಅಧ್ಯಕ್ಷರ ಅವಧಿ ಮುಗಿಯುತ್ತಾ ಬಂದಿರುವುದರಿಂದ ಆಸಕ್ತಿ ಕಳೆದುಕೊಂಡಂತಿದೆ. ನಗರಸಭೆಯಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗಿದೆ. ಜನಸಾಮಾನ್ಯರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಜನರು ದಂಗೆ ಎದ್ದು ನಗರಸಭೆ ಮೇಲೆ ಕಲ್ಲು ತೂರುವ ಸ್ಥಿತಿ ಬರಬಹುದು ಎಂದರು.
ಸದಸ್ಯರಾದ ಸಬಿತಾ, ಮಂಜುಳಾ ಮುರುಘನ್ ತಮ್ಮ ವಾರ್ಡ್ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷೆ ಸವಿತಾ ರಾಕೇಶ್, ಇತರ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು,