ಜಿಲ್ಲೆ

ಸಹಕಾರ ಸಂಸ್ಥೆಗಳಿಗೆ ಸದಸ್ಯರೇ ಶಕ್ತಿ

ಪ್ರಸಿನ್ ಕೆ.ಆರ್

ಹಾಸನ: ಒಂದು ಸಂಘ ಅಥವಾ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಲು ಆ ಸಂಘದ ನಿರ್ದೇಶಕರು ಮತ್ತು ಸದಸ್ಯರೇ ಶಕ್ತಿ ಎಂದು ಹೊಯ್ಸಳ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ ರುದ್ರಪ್ಪ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿ ಇರುವ ವಿಶ್ವೇಶ್ವರಯ್ಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಹೊಯ್ಸಳ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಳೆದ ಮೂರು ವರ್ಷಗಳಿಂದ ಪಾರದರ್ಶಕ ಆಡಳಿತ ಮಾಡಿಕೊಂಡು ಸಂಘದ ಪದಾಧಿಕಾರಿಗಳಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಕಾಮಗಾರಿ ಮೂಲಕ ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಿ ನಿವೇಶನಗಳನ್ನು ಒದಗಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದುವರೆಯಲು ಎಲ್ಲರ ಸಹಕಾರ ಅಗತ್ಯ ಎಂದರು.

ಸಂಘದ ಉಪಾಧ್ಯಕ್ಷ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಸಂಘದ ಆಯವ್ಯಯ, ಲಾಭ-ನಷ್ಟ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಹೊಸ ಬಡಾವಣೆ ನಿರ್ಮಿಸಿ ಸಂಘದ ಸದಸ್ಯರಿಗೆ ಹಸ್ತಾಂತರ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

ಹೊಯ್ಸಳ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರು ಹಾಗೂ ನಿರ್ದೇಶಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜತೆಗೆ ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಗುರುತಿನ ಚೀಟಿ ವಿತರಿಸಲಾಯಿತು.

ಕಂಚಮಾರನಹಳ್ಳಿ ಕಾಂತರಾಜ್, ವಿನೇಶ್, ಪದ್ಮರಾಜ್, ಕೆ.ಆರ್.ಮಂಜೇಗೌಡ, ರುದ್ರೇಶ್, ಗೋಪಾಲ್, ಶಿವಾನಂದ್ ನಾಯಕ್, ಸತ್ಯನಾರಾಯಣ, ಕೆ.ಪಿ. ಮಂಜುನಾಥ್, ಮುಷ್ತಾಕ್ ಅಹಮ್ಮದ್ ಶೇಕ್, ವಾಸೀಮ್ ಷರೀಫ್, ಚನ್ನಕೇಶವ, ಕೃಷ್ಣಮೂರ್ತಿ, ತಮ್ಮಣ್ಣ ಶೆಟ್ಟಿ, ಶಿವಸ್ವಾಮಿ, ಸಿ.ಎನ್ ಉಷಾ, ರಘು ಇತರರು ಇದ್ದರು.