ಮಂಡ್ಯ: ಮುಂದಿನ ಪೀಳಿಗೆಗೆ ಪಶ್ಚಿಮ ಘಟ್ಟ ಉಳಿಯಬೇಕೆಂಬ ಮಾಧವ ಗಾಡ್ಗಿಳ್ ವರದಿಯನ್ನು ಕಡೆಗಣಿಸಿ ಅಭಿವೃದ್ಧಿ ಯೋಜನೆಯ ಹೆಸರಿನಲ್ಲಿ ಲಕ್ಷಾಂತರ ಮರಗಳನ್ನು ಕಡಿಯಲು ಮುಂದಾಗಿರುವುದನ್ನು ತಪ್ಪಬೇಕಿದೆ. ಮಾತ್ರವಲ್ಲದೆ ಆಯಾ ಜಿಲ್ಲೆಯ ಭಾಗಗಳಲ್ಲಿನ ಕಾಡುಗಳನ್ನು ಸೂಕ್ಷ್ಮ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯ ಪರಿಸರ ರಮೇಶ್ ಒತ್ತಾಯಿಸಿದರು.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಾಲು ಸಾಲು ಗುಡ್ಡ ಕುಸಿತ ಪ್ರಕರಣ ನಡೆಯುತ್ತಿದೆ. ಪಶ್ಚಿಮ ಘಟ್ಟದ ಉಳಿಯಬೇಕಾದರೆ ಮಾಧವ ಗಾಡ್ಗೀಳ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ, ಪ್ರವಾಸೋದ್ಯಮದ ಹೆಸರಿನಲ್ಲಿ ರೋಪ್‌ವೇ, ಸುರಂಗ ಮಾರ್ಗಗಳನ್ನು ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟ ನೂರಾರು ದುರಂತ ಕಥೆಗಳಿಗೆ ಸಾಕ್ಷಿಯಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತೀರ್ಥಹಳ್ಳಿ-ಆಗುಂಬೆ ಪಶ್ಚಿಮ ಘಟ್ಟ ಮಾರ್ಗದಲ್ಲಿ ಸುರಂಗ ಮಾರ್ಗ, ಹುಬ್ಬಳ್ಳಿ ಅಂಕೋಲ ರೈಲುಮಾರ್ಗಕ್ಕಾಗಿ 2 ಲಕ್ಷ ಮರಗಳನ್ನು ಕಡಿಯಲು ಸಮೀಕ್ಷೆ, ಶರಾವತಿ ಭೂಗರ್ಭ ಯೋಜನೆಗಾಗಿ ಮತ್ತೆ ಸಾಗರದಿಂದ ಶಿರಸಿವರೆಗೆ ರೈಲು ಮಾರ್ಗ, ಧರ್ಮಸ್ಥಳ ಹಾಗೂ ಕೊಲ್ಲೂರಿನಲ್ಲಿ ಏರ್ಪೋಟ್ ನಿಲ್ದಾಣ, ಶಿವಮೊಗ್ಗದಿಂದ ಸಾಗರದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಇವೆಲ್ಲವೂ ಪರಿಸರ ಸೂಕ್ಷ್ಮ ಪ್ರದೇಶಗಳಾಗಿದ್ದು ಜೀವಸಂಕುಲಕ್ಕೆ ಮಾರಕವಾಗಲಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಆಡಳಿತಕ್ಕೆ ಬರುವ ಪ್ರತಿ ಸರ್ಕಾರ ವೈಜ್ಞಾನಿಕವಾದ ಸಮಿತಿ ರಚನೆ ಮಾಡಿ ಪರಿಸರ ಕುರಿತ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಯೋಜನೆಗಳನ್ನು ರೂಪಿಸುವುದಿಲ್ಲ. ಬದಲಿಗೆ ಅವೈಜ್ಞಾನಿಕ ಕಾಮಗಾರಿ ಕೈಗೆತ್ತಿಕೊಳ್ಳುತ್ತಿವೆ. ಮೊದಲು ಕೆಆರ್‌ಎಸ್ ಅಮ್ಯೂಸ್‌ಮೆಂಟ್ ಯೋಜನೆ ಬಗ್ಗೆ ರೈತ ಮುಖಂಡರ ಜತೆ ಚರ್ಚಿಸಬೇಕು. ಈ ಯೋಜನೆಯನ್ನು ಕೈಬಿಟ್ಟು ಮೂಲ ಕೆಆರ್‌ಎಸ್ ಅಣೆಕಟ್ಟೆ ಹೆಸರು ಶಾಶ್ವತವಾಗಿ ಉಳಿಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಚ್.ಎಲ್.ಪ್ರಕಾಶ್, ವಿಜಯ್‌ಕುಮಾರ್ ಮಲ್ಲನಾಯಕನಕಟ್ಟೆ ಇದ್ದರು.