ಜಿಲ್ಲೆ

ಯಕ್ಷಗಾನದಿಂದ ಪುರಾಣ ಪರಿಚಯ : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ನವರಸ ಕಲೆಯಾಗಿರುವ ಯಕ್ಷಗಾನದಲ್ಲಿ ಭಾವ-ಭಾಷಾ ಶುದ್ಧಿಗೆ ಆದ್ಯತೆ ಜತೆಗೆ ಸಮಾಜಕ್ಕೆ ಪುರಾಣ ಕಥೆಗಳ ಪರಿಚಯವುಂಟಾಗಲು ಸಹಕಾರಿಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಸದಸ್ಯ ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಧಾಕೃಷ್ಣ ಕೆ.ಉಳಿಯತಡ್ಕ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಪುಲ್ಕೂರು ಶ್ರೀ ಮಹಾದೇವ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಶೀನಶೆಟ್ಟಿ ಕಜೆ, ಪ್ರತಿಷ್ಠಾನದ ಪೋಷಕರಾದ ಎಚ್.ಕೃಷ್ಣ ಭಟ್ ಮಂಗಳೂರು, ಸದಸ್ಯರಾದ ಎಂ.ಎಲ್.ಭಟ್ ಸಾಗರ, ಸದಾಶಿವ ಭಟ್ ಎದ್ರುಕಳ ಉಪಸ್ಥಿತರಿದ್ದರು.

ರಾಜಾರಾಮ ರಾವ್ ಮೀಯಪದವು ಸ್ವಾಗತಿಸಿದರು. ಪ್ರಶಾಂತ ಹೊಳ್ಳ ನೀರಾಳ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಜಯರಾಮ ದೇವಸ್ಯ ಮತ್ತು ಬಳಗದವರಿಂದ ಶರಸೇತುಬಂಧನ ಯಕ್ಷಗಾನ ತಾಳಮದ್ದಳೆ, ಸಾಕೇತ ಕಲಾವಿದರು ಹೆಗ್ಗೋಡು ಸಾಗರ ಅವರಿಂದ ಬಡಗುತಿಟ್ಟಿನ ಗದಾಯುದ್ಧ ಯಕ್ಷಗಾನ ಪ್ರದರ್ಶನ ನಡೆಯಿತು.

ಸಿರಿಬಾಗಿಲು ಕೇವಲ ಊರಿನ ಹೆಸರು ಮಾತ್ರವಲ್ಲ, ಧರ್ಮ ಸಂಸ್ಕೃತಿಯ ಹೆಬ್ಬಾಗಿಲು. ಆರಾಧನಾ ಕಲೆಯಾದ ಯಕ್ಷಗಾನವನ್ನು ಇಂದು ವಿದ್ವಾಂಸರು ಸೇರಿ ಅದರ ಸಿರಿವಂತಿಕೆ ಹೆಚ್ಚಿಸಿದ್ದಾರೆ. ಪ್ರತಿಯೊಬ್ಬರ ಬದುಕಿಗೆ ಪ್ರತಿ ಪ್ರಸಂಗದಲ್ಲಿ ಬರುವ ಸಂದೇಶಗಳು ಮಾರ್ಗದರ್ಶನವಾಗುತ್ತವೆ. ಒಬ್ಬ ವ್ಯಕ್ತಿಯ ನಿಸ್ವಾರ್ಥ ಸೇವೆಗೆ ದಾನಿಗಳ ಸಹಕಾರ ಸಿಗುತ್ತದೆ ಎಂಬುದಕ್ಕೆ ಪ್ರತಿಷ್ಠಾನ ಮುಖೇನ ಸಿರಿಬಾಗಿಲು ಪ್ರತಿಷ್ಠಾನ ನಡೆಸುತ್ತಿರುವ ಯಶಸ್ವಿ ಚಟುವಟಿಕೆ ನಿದರ್ಶನ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ