ವಂಗೀಪುರ ನಂಬಿ ಮನೆತನದಿಂದ ಸ್ವಾಮಿಗೆ ಫಲ ಸಮರ್ಪಣೆ
ಮೇಲುಕೋಟೆ : ಇಲ್ಲಿನ ಶ್ರೀ ಚೆಲುವನಾರಾಯಣಸ್ವಾಮಿ ದಿವ್ಯಕ್ಷೇತ್ರ ಜೀರ್ಣೋದ್ಧಾರಗೊಂಡ ವಾರ್ಷಿಕ ವಿಶೇಷ ಪುನರ್ವಸು ಉತ್ಸವ ಫೆ. 10ರಂದು ವೈಭವದಿಂದ ನೆರವೇರಲಿದೆ. ಆಚಾರ್ಯ ಶ್ರೀ ರಾಮಾನುಜರು ಯದುಗಿರಿಯ ಬೆಟ್ಟದಮೇಲೆ ಕಗ್ಗತ್ತಲ ಕಾಡಿನ ನಡುವೆ ಇದ್ದ ಹುತ್ತ ಕರಗಿಸಿ ಶ್ರೀ ಚೆಲುವನಾರಾಯಣಸ್ವಾಮಿಯ ದಿವ್ಯಮಂಗಳ ರೂಪವನ್ನು ಮಕರ ಶುಕ್ಲ ಪುನರ್ವಸು ನಕ್ಷತ್ರದಂದು ಜಗತ್ತಿಗೆ ದರ್ಶನ ಮಾಡಿಸಿದರು. ಹೊಯ್ಸಳ ರಾಜ ವಿಷ್ಣುವರ್ಧನ (ಬಿಟ್ಟಿದೇವ)ನಿಂದ ದೇಗುಲ ನಿರ್ಮಿಸಿದ್ದರು.
ಈ ಶುಭದಿನದ ಸಂಭ್ರಮಕ್ಕಾಗಿ ಪ್ರತಿವರ್ಷ ಪುನರ್ವಸು ಉತ್ಸವ ನೆರವೇರುತ್ತದೆ. ಅಂದು ದೇವಾಲಯದಲ್ಲಿ ಇಡೀ ದಿನ ಧಾರ್ಮಿಕ ಕೈಂಕರ್ಯಗಳು ನೆರವೇರುತ್ತವೆ. ಭಾಷ್ಯಕಾರ ಸನ್ನಿಧಿ ವಂಗೀಪುರ ನಂಬಿ ಮನೆತನ ಪ್ರತಿವರ್ಷ ಈ ಮಹೋತ್ಸವವನ್ನು ವೈಭವದಿಂದ ನಡೆಸಿಕೊಂಡು ಬರುತ್ತಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವದ ಕೈಂಕರ್ಯಗಳು ನಡೆಯಲಿದ್ದು ಪುನರ್ವಸು ಉತ್ಸವಕ್ಕಾಗಿ ದೇವಾಲಯ ಸಜ್ಜುಗೊಳ್ಳುತ್ತಿದೆ.
10ರಂದು ನಸುಕಿನಲ್ಲೇ ರಾಮಾನುಜರಿಗೆ ಅಭಿಷೇಕ, 6 ಗಂಟೆಗೆ ಕಲ್ಯಾಣಿ ಉತ್ಸವ, 8.30ಕ್ಕೆ ಶ್ವೇತ ವಸ್ತ್ರಧಾರಣೆ ಗದ್ಯ ತ್ರಯ ಗೋಷ್ಠಿ, ತಿರುಪ್ಪಾವೈ ಶಾತ್ತುಮೊರೆ ನೆರವೇರಲಿದೆ. ಮಧ್ಯಾಹ್ನ12 ಗಂಟೆಗೆ ವಂಗೀಪುರಂ ಮನೆತನದಿಂದ ಸ್ವಾಮಿಗೆ ನೂರಾರು ತಟ್ಟೆಗಳಲ್ಲಿ ಫಲ- ಪುಷ್ಪ ಸಮರ್ಪಣೆಯ ಕೈಂಕರ್ಯ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ತಿರುವಾರಾಧನೆ, ತೀರ್ಥಗೋಷ್ಠಿಗಳು ಸಂಪನ್ನಗೊಳ್ಳಲಿವೆ. ರಾತ್ರಿ 8ಕ್ಕೆ ರಾತ್ರಿ ಪೂಜೆ, ನಂತರ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ತಲುಪಲಿದೆ. ಉತ್ಸವದ ಧಾರ್ಮಿಕ ಕೈಂಕರ್ಯ ನಡೆಯುವಕಾರಣ ಮಧ್ಯಾಹ್ನ 4ರ ನಂತರವೇ ಚೆಲುವನಾರಾಯಣಸ್ವಾಮಿದೇವರ ದರ್ಶನಕ್ಕೆ ಅವಕಾಶ ದೊರಕಲಿದೆ.