ವಂಗೀಪುರ ನಂಬಿ ಮನೆತನದಿಂದ ಸ್ವಾಮಿಗೆ ಫಲ ಸಮರ್ಪಣೆ
ಮೇಲುಕೋಟೆ : ಶ್ರೀ ಚೆಲುವನಾರಾಯಣಸ್ವಾಮಿ ದಿವ್ಯಕ್ಷೇತ್ರ ಜೀರ್ಣೋದ್ಧಾರಗೊಂಡ ವಾರ್ಷಿಕ ವಿಶೇಷ ಪುನರ್ವಸು ಉತ್ಸವ
ಸೋಮವಾರ ಸಡಗರ ಸಂಭ್ರಮದಿಂದ ನೆರವೇರಿತು. ವಿದ್ವಾನ್ ಬಿ.ವಿ.ಆನಂದಾಳ್ವಾರ್ ನೇತೃತ್ವದಲ್ಲಿ ವೈಭವಯುತವಾಗಿ ನಡೆದ ರಾಮಾನುಜರ ಪುನರ್ವಸು ಉತ್ಸವದ ನಿಮಿತ್ತ ದೇವಾಲಯದ ಆವರಣವನ್ನು ರಂಗವಲ್ಲಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 5.30ಕ್ಕೆ ರಾಮಾನುಜಾಚಾರ್ಯರ ಮೂರ್ತಿ ಸನ್ನಿಧಿಯಲ್ಲಿ ವೇದಪಾರಾಯಣ ಮತ್ತು ವಿಶೇಷ ಆರಾಧನೆಯೊಂದಿಗೆ ಅಭಿಷೇಕ ಮಾಡಲಾಯಿತು. ನಂತರ ಕಲ್ಯಾಣಿಯಲ್ಲಿ ರಾಮಾನುಜರಿಗೆ ನಿತ್ಯಪೂಜಾಕೈಂಕರ್ಯ ನೆರವೇರಿತು. ಕಲ್ಯಾಣಿಯಿಂದ ಹೊರಟ ಆಚಾರ್ಯರ ಉತ್ಸವ ಮಧ್ಯಾಹ್ನ 12-30ರವೇಳೆಗೆ ದಿವ್ಯಪ್ರಬಂಧ ಪಾರಾಯಣ,ವಿಶೇಷ ಮಂಗಳವಾದ್ಯದೊಂದಿಗೆ ಚೆಲುವನಾರಾಯಣಸ್ವಾಮಿ ದೇಗುಲ ತಲುಪಿತು.ನೂರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿ ಆಚಾರ್ಯರ ದರ್ಶನ ಪಡೆದರು.
ಭಕ್ತರಮನಸೂರೆಗೊಂಡ ತಟ್ಟೆಗಳ ವೈಭವ
ವಂಗೀಪುರಂ ಮನೆತನದಿಂದ ಸ್ವಾಮಿಗೆ ನೂರಾರು ತಟ್ಟೆಗಳಲ್ಲಿ ಫಲ- ಪುಷ್ಪ ಸಮರ್ಪಣೆಯ ಕೈಂಕರ್ಯ ನಡೆಯಿತು. ಸೇಬು, ಸೀಬೆ, ದಾಳಿಂಬೆ, ಪರಂಗಿ, ಚಕೋತ, ದ್ರಾಕ್ಷಿ, ಮಾವು, ಖರ್ಜೂರ, ಕಲ್ಲುಸಕ್ಕರೆ, ತೆಂಗು, ಕೊಬ್ಬರಿ ಹೀಗೆ ವಿವಿಧ ಬಗೆಯ ಹಣ್ಣುಗಳು ಮತ್ತು ಹೂವುಗಳನ್ನು ಜೋಡಿಸಿದ್ದು ಗಮನ ಸೆಳೆಯಿತು. ಇಳೈ ಆಳ್ವಾರ್‌ಸ್ವಾಮಿ ದಂಪತಿ, ವಿದ್ವಾನ್ ರಾಮಪ್ರಿಯ, ಪಾರ್ಥಸಾರಥಿ, ಯಮುನಾಚಾರ್ಯ ಅವರು , ಛತ್ರಿ, ಚಾಮರ, ಮಂಗಳವಾದ್ಯದೊಂದಿಗೆ ದೇವಾಲಯದ ಸುತ್ತ ಭವ್ಯಮೆರವಣಿಗೆ ಮಾಡಿದರು. ತಟ್ಟೆಗಳಲ್ಲಿದ್ದ ಫಲಗಳನ್ನು ಚೆಲುವ ನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಸಮರ್ಪಿಸಿದರು. ಫಲ ಪಂಚಾಮೃತ ಮತ್ತು ಕಂದಂಬ ಸಕ್ಕರೆಪೊಂಗಲ್ ಪ್ರಸಾದಗಳನ್ನು ನೆರೆದಿದ್ದ ಸಹಸ್ರಾರು ಭಕ್ತರಿಗೆ ವಿತರಣೆ ಮಾಡಲಾಯಿತು.