ಜಿಲ್ಲೆ

ಚೆಲುವನ ಸನ್ನಿಧಿಯಲ್ಲಿ ಅಕ್ಷರಜಾತ್ರೆ

Mandya

ಮೇಲುಕೋಟೆ: ದಕ್ಷಿಣ ಬದರಿ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಹಾಗೂ ಕವಿ ಪು.ತಿ.ನ.ಹುಟ್ಟೂರಾದ ಮೇಲುಕೋಟೆಯಲ್ಲಿ ಶುಕ್ರವಾರದಿಂದ ಎರಡು ದಿನ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಮೊದಲ ಬಾರಿಗೆ ಆತಿಥ್ಯ ವಹಿಸಿಕೊಳ್ಳುತ್ತಿರುವುದರಿಂದ ಧಾರ್ಮಿಕ ಕ್ಷೇತ್ರ ಸಿಂಗಾರಗೊಂಡಿದೆ.
ಸರ್ಕಾರಿ ಪ್ರಾಥಮಿಕ ಶಾಲೆ ಎದುರಿನ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ರಸ್ತೆಯುದ್ದಕ್ಕೂ ಹಸಿರು ತೋರಣದಿಂದ ಸಿಂಗರಿಸಲಾಗಿದೆ. ಕನ್ನಡದ ಹಬ್ಬವನ್ನು ವಿಜೃಂಭಣೆಯಿಂದ ನಡೆಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಕನ್ನಡ ಬಾವುಟ ರಾರಾಜಿಸುತ್ತಿವೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು ತಲೆಎತ್ತಿವೆ. ಪುಸ್ತಕ ಮಳಿಗೆ, ಸಾವಯವ ಉತ್ಪನ್ನಗಳ ಮಳಿಗೆ, ಇತರ ದೇಶೀ ಸೊಗಡಿನ ಉತ್ಪನ್ನಗಳ ಮಳಿಗೆ ಸಾಹಿತ್ಯಾಸಕ್ತರನ್ನು ಆಕರ್ಷಿಸಲಿವೆ.
ಬೃಹತ್ ವೇದಿಕೆ ಎದುರು ನಾಲ್ಕು ಸಾವಿರ ಜನರು ಕೂರುವುದಕ್ಕೆ ಆಸನ ವ್ಯವಸ್ಥೆ ಮಾಡಲಾಗಿದೆ.
ಧ್ವಜಾರೋಹಣದಿಂದ ಪ್ರಾರಂಭ: ಜ.31ರಂದು ಬೆಳಗ್ಗೆ 8.30ಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ರಾಷ್ಟ್ರಧ್ವಜ, ಶಾಸಕ ಸಿ.ಎಸ್.ಪುಟ್ಟರಾಜು ನಾಡಧ್ವಜ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಪರಿಷತ್ ಧ್ವಜಾರೋಹಣ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಶನಿದೇವರ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು. ಸಮ್ಮೇಳನಾಧ್ಯಕ್ಷರನ್ನು ಬೆಳ್ಳಿರಥದಲ್ಲಿ ಕೂರಿಸಿ 250 ಮಹಿಳೆಯರ ಪೂರ್ಣಕುಂಭ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆಯಲ್ಲಿ ಭವ್ಯ ಮೆರವಣಿಗೆ ಡಿಸಿ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಲಿದ್ದಾರೆ. ಡಾ.ಭಾಷ್ಯಂ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡೊಳ್ಳು ಕುಣಿತ, ವೀರಗಾಸೆ, ಶಾಲಾ ಮಕ್ಕಳ ಬ್ಯಾಂಡ್‌ಸೆಟ್, ಕೋಲಾಟ, ತಮಟೆ, ಪೂಜಾ ಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಸಾಥ್ ನೀಡಲಿವೆ.