ಬೆಂಗಳೂರು: ಹಂದಿಗೂಡಿನಂತಹ ಗುಡಿಸಲುಗಳು, ಮೂಗಿಗೆ ಬಡಿಯುವ ದುರ್ವಾಸನೆ, ಬಯಲು ಶೌಚಗೃಹ, ಕೊಳಚೆ ನೀರಿನ ನಡುವೆಯೇ ನಿತ್ಯಕರ್ಮ ಮುಗಿಸುವ ಅನಿವಾರ್ಯತೆ, ದಿಕ್ಕುದೆಸೆ ಇಲ್ಲ, ಹೊರಪ್ರಪಂಚದ ಅರಿವಿಲ್ಲ...
ಇದು ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಜೀವನದ ವಾಸ್ತವ ಚಿತ್ರಣ. ನರಕ ಸದೃಶ ಎನ್ನುವಂತಹ ಪರಿಸರದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಜೀವನದ ಬಂಡಿ ದೂಡುತ್ತಿರುವುದು ರಾಷ್ಟ್ರೀಯ ಸಾಯಿ ಕರ್ಮಚಾರಿ ಆಯೋಗದ ಭೇಟಿ ವೇಳೆ ಬೆಳಕಿಗೆ ಬಂದಿದೆ.
ಯಾವುದೇ ಮೂಲಸೌಲಭ್ಯ ಕಲ್ಪಿಸದೆ ನಡೆಸಿಕೊಳ್ಳುತ್ತಿರುವುದು ಜಿಲ್ಲಾಡಳಿತದ ಕೋಪಕ್ಕೂ ಕಾರಣವಾಗಿದೆ. ಕುಡಿಯಲು ಶುದ್ಧ ನೀರಿಲ್ಲ, ಶೌಚಗೃಹವಿಲ್ಲ, ಸ್ಥಳದಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯವಸ್ಥೆ ಇಲ್ಲ, ಶುಚಿತ್ವ ಎಂಬುದರ ಕಲ್ಪನೆಯೇ ಇಲ್ಲದ ವಾತಾವರಣದಲ್ಲಿ ಇಷ್ಟು ಮಂದಿಯನ್ನು ದುಡಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ‘ಇದೊಂದು ನರಕ’ ಎಂದು ಉದ್ಗರಿಸಿದ್ದಾರೆ.
ಬೆಂಕಿ ಅನಾಹುತದ ಭೀತಿ: ಒಂದಕ್ಕೆ ಮತ್ತೊಂದು ಹೊಂದಿಕೊಂಡಂತೆ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಗುಡಿಸಲು ಭಾಗದಲ್ಲಿ ಬೆಂಕಿ ತಗುಲಿದರೆ ಅಷ್ಟೂ ಜನರ ಬದುಕನ್ನು ಅಗ್ನಿ ಆಹುತಿ ಪಡೆಯಲಿದೆ. ಕೆಲವು ತಿಂಗಳ ಹಿಂದಷ್ಟೆ ಇಂಥ ಅನಾಹುತವೊಂದು ಸಂಭವಿಸಿ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಸಣ್ಣಮಟ್ಟದ ಅವಘಡವಾದ್ದರಿಂದ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಆದರೆ ಯಾವುದೇ ಕ್ಷಣದಲ್ಲಾದರೂ ಅಮಾಯಕ ಕಾರ್ಮಿಕರು ಬೆಂಕಿ ಬಲೆಗೆ ಸಿಲುಕುವ ಅಪಾಯವಿದೆ.
ಎಲ್ಲವೂ ನಿಗೂಢ: ಎಂಎಸ್‌ಜಿಪಿ ಇನ್‌ರ್ಾಟೆಕ್ ಗ್ರಾಮೀಣ ಕೃಷಿ ಕ್ಷೇತ್ರ, ಘನ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಕೇಂದ್ರ, ಎರೆಹುಳು ಗೊಬ್ಬರ ತಯಾರಿಕೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ವೈಜ್ಞಾನಿಕ ಗೊಬ್ಬರ ಶೇಖರಣೆ, ಜೈವಿಕ ಇಂಧನ ಹಾಗೂ ವಿದ್ಯುತ್ ಉತ್ಪಾದನೆ ಹೆಸರಿನಲ್ಲಿ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಭಕ್ತರಹಳ್ಳಿಯಲ್ಲಿ ಕಾರ್ಯಾರಂಭ ಮಾಡಿದ ಎಂಎಸ್‌ಜಿಪಿ ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗ್ಗೆ ಎಲ್ಲವೂ ನಿಗೂಢ ಎನ್ನುವಂತಿದೆ. ಇವರೆಲ್ಲರೂ ಬಾಂಗ್ಲಾ ಮೂಲದ ವಲಸಿಗರು ಎಂಬ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಸಾಯಿ ಕರ್ಮಚಾರಿ ಆಯೋಗದ ಭೇಟಿ ವೇಳೆ ದೊರೆತ ಆಧಾರ್ ಕಾರ್ಡ್‌ಗಳು ಸಹ ನಕಲಿ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೋಲ್ಕತ ಮೂಲಕ ವ್ಯಕ್ತಿಯೊಬ್ಬ ಮಾನವ ಸಂಪನ್ಮೂಲ ಸರಬರಾಜು ಮಾಡುವ ದಂಧೆ ನಡೆಸುತ್ತಿರುವ ಬಗ್ಗೆ ರಾಷ್ಟ್ರೀಯ ಸಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಸಂದೇಹ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ವಲಸಿಗರನ್ನು ಈ ಭಾಗಕ್ಕೆ ಕರೆತಂದವರು ಯಾರು, ಸ್ಥಳೀಯರಿಗೂ ಮಾಹಿತಿ ಇಲ್ಲದೆ ಎಲ್ಲರನ್ನು ಗುಪ್ತವಾಗಿಯೇ ಇರಿಸಿಕೊಂಡಿದ್ದಾದರೂ ಹೇಗೆ, ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇಲ್ಲವೆ, ಜಿಲ್ಲಾಡಳಿತದ ಗಮನಕ್ಕೆ ಬರದೆ ಇಷ್ಟೆಲ್ಲ ನಡೆಯುತ್ತಿದೆಯೇ ಎಂಬ ಸಂದೇಹಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಾರ್ಮಿಕರಲ್ಲ..!: ಈ ಕಸ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಇಎಸ್‌ಐ, ಪಿಎ್ ಸೌಲಭ್ಯಗಳಿಲ್ಲ ಎಂಬ ಆರೋಪವೂ ಇದೆ. ನೂರಾರು ಕಾರ್ಮಿಕರು ದುಡಿಯುವ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಮುಖ್ಯವಾಗಿ ಈ ಸೌಲಭ್ಯ ಕಲ್ಪಿಸಲೇಬೇಕು. ಇವು ಇಲ್ಲವಾದರೆ ಇವರ‌್ಯಾರೂ ಕಾರ್ಮಿಕರಲ್ಲವೆ? ಇಲ್ಲಿ ಸಾಕಷ್ಟು ಬಾಲ ಕಾರ್ಮಿಕರು ಇರುವ ಬಗ್ಗೆಯೂ ಗುಮಾನಿ ಇದೆ. ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ಪರಿಶೀಲನೆ ನಡೆಸದ ಹೊರತು ಇಲ್ಲಿನ ನಿಗೂಢತೆ ಬೆಳಕಿಗೆ ಬರದೆ ಕಸದಲ್ಲೇ ಕರಗಿಹೋಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಸ ಘಟಕದ ನಿರ್ವಹಣೆ, ಇಲ್ಲಿನ ಕಾರ್ಯವೈಖರಿ ಪ್ರತಿಯೊಂದೂ ಜಿಲ್ಲಾಡಳಿತದ ಗಮನಕ್ಕೆ ಬರದೆ ನಡೆಯುವಂತಿಲ್ಲ. ಇಲ್ಲಿನ ಕೂಲಿ ಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸಿ ಸರ್ಕಾರದೊಂದಿಗೆ ಒಪ್ಪಂದದ ಪ್ರಕಾರವೇ ನಡೆಯಬೇಕು. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಇಲಾಖೆಗೂ ಸೂಚನೆ ನೀಡಲಾಗಿದೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ