ಚಿಕ್ಕಬಳ್ಳಾಪುರ: ಹೆಚ್ಚಿನ ಪ್ರಕರಣಗಳ ಇತ್ಯರ್ಥದ ಗುರಿಯೊಂದಿಗೆ ಜಿಲ್ಲೆಯಲ್ಲಿ ಜು.13ರಂದು ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ, ಜಿಲ್ಲೆಯ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಪೈಕಿ ಇತ್ಯರ್ಥಪಡಿಸಬಹುದಾದ ವ್ಯಾಜ್ಯಪೂರ್ವ ಪ್ರಕರಣಗಳನ್ನು ವಕೀಲರು ಮತ್ತು ಕಕ್ಷಿದಾರರ ಪರಸ್ಪರ ಸಹಕಾರದೊಂದಿಗೆ ರಾಜೀ ಮೂಲಕ ಇತ್ಯರ್ಥ ಪಡಿಸಲಾಗುತ್ತಿದ್ದು, ಸಾರ್ವಜನಿಕರು ಅದಾಲತ್‌ನ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನಿರಂತರವಾಗಿ ರಾಜೀ ಪಂಚಾಯಿತಿ ಮೂಲಕ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಇದರ ಜತೆಗೆ ಕಕ್ಷಿದಾರರ ಅನುಕೂಲಕ್ಕಾಗಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.ಈ ಬಾರಿ ಅದಾಲತ್‌ನಲ್ಲಿ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಉಭಯ ಕಕ್ಷಿದಾರರು ರಾಜೀ ಮಾಡಿಕೊಳ್ಳಲು ಸೂಕ್ತ ಕಾನೂನು ಸಲಹೆ ಮತ್ತು ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ ಎಂದರು.
ಅದಾಲತ್‌ನಲ್ಲಿ ಪ್ರಕರಣಗಳನ್ನು ಸ್ವಯಂಪ್ರೇರಿತರಾಗಿ ಇತ್ಯರ್ಥಪಡಿಸಿಕೊಳ್ಳುವುದರಿಂದ ಎರಡೂ ಕಡೆಯವರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ವಿವಾದಗಳು ಸುಖಾಂತ್ಯಗೊಳ್ಳುತ್ತವೆ. ಇನ್ನೂ ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನೂ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದರು. ಒಂದು ವೇಳೆ ಪ್ರಕರಣಗಳು ಸಂಧಾನದ ಮೂಲಕ ಇತ್ಯರ್ಥಗೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಸಂರ್ಪೂವಾಗಿ ಮರುಪಾವತಿ ಮಾಡಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಸಮ್ಮತಿಯಾದಲ್ಲಿ ಮಾತ್ರ ಪ್ರಕರಣ ಇತ್ಯರ್ಥವಾಗುತ್ತದೆ. ಇದರಿಂದ ಕಡಿಮೆ ಖರ್ಚು, ಸಮಯದ ಉಳಿತಾಯ, ವಿವಾದ ಅಂತ್ಯಗೊಂಡು ಉತ್ತಮ ಬಾಂಧವ್ಯ ವೃದ್ಧಿ ಸೇರಿ ವಿವಿಧ ಲಾಭಗಳಾಗುತ್ತವೆ ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೆ.ಬಿ.ಉಮೇಶ್ ಇದ್ದರು.
ಯಾವ ಪ್ರಕರಣಗಳು?
ಜಿಲ್ಲಾ ನ್ಯಾಯಾಲಯವೂ ಸೇರಿ ವಿವಿಧ ಹಂತದ ನ್ಯಾಯಾಲಯಗಳಲ್ಲಿ ರಾಜಿಯಾಗಬಲ್ಲ ಅಪರಾಧ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವುದು, ಕೈಗಾರಿಕಾ ಕಾರ್ಮಿಕರ ವೇತನ, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿನ ಪ್ರಕರಣಗಳು, ವಿಚ್ಛೇದನವನ್ನು ಹೊರತುಪಡಿಸಿ ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು, ಚೆಕ್ಕು ಅಮಾನ್ಯ, ಸಾಲ ವಸೂಲಾತಿ, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕಾರ್ಮಿಕರ ವಿವಾದಗಳು, ಭೂಸ್ವಾಧೀನ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಹಾಗೂ ಸಿವಿಲ್ ಪಿಂಚಣಿ, ರಾಜಿಯಾಗಬಲ್ಲ ಸಿವಿಲ್ ಹಾಗೂ ಕಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳನ್ನೂ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ಮಾರ್ಚ್‌ನಲ್ಲಿ ನಡೆದ ಅದಾಲತ್‌ನ ಸಾಧನೆ
ಕಳೆದ ಮಾ.16ರಂದು ಜಿಲ್ಲಾಮಟ್ಟದ ಲೋಕ ಅದಾಲತ್ ಕೈಗೊಳ್ಳಲಾಗಿತ್ತು. ಅಂದು ಬಾಕಿ ಇದ್ದ 42,123 ಪ್ರಕರಣಗಳ ಪೈಕಿ 4,979 ಪ್ರಕರಣಗಳನ್ನು ಗುರುತಿಸಿ, ಕೈಗೆತ್ತಿಕೊಂಡಿದ್ದು ಇದರಲ್ಲಿ 3,334 ಪ್ರಕರಣಗಳು ವಕೀಲರು ಹಾಗೂ ಕಕ್ಷಿದಾರರ ಸಹಕಾರದೊಂದಿಗೆ ಸುಖಾಂತ್ಯ ಕಂಡಿವೆ. ಇತ್ಯರ್ಥ ಪ್ರಕರಣಗಳಲ್ಲಿ 15,52,66,775 ರೂ. ಪಾವತಿ ತೀರ್ಮಾನವಾಗಿದೆ. ವಿದ್ಯುತ್ ಬಿಲ್, ಬ್ಯಾಂಕ್ ಸಾಲ ವಸೂಲಾತಿ, ನೀರಿನ ಶುಲ್ಕ, ವಿಮೆ ಸೇರಿ 40,576 ಪ್ರಕರಣಗಳ ಪೈಕಿ 39,205 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿಡವು. ಇದರಲ್ಲಿ 92,69,777 ರೂ. ಪಾವತಿ ಇತ್ಯರ್ಥವಾಗಿದೆ.
5,325 ಪ್ರಕರಣ ಇತ್ಯರ್ಥ ಗುರಿ
ಜಿಲ್ಲೆಯಲ್ಲಿ 40,408 ಪ್ರಕರಣಗಳು ಬಾಕಿಯಿವೆ. ಈ ಪೈಕಿ ಜೂನ್ 20ರವರೆಗೆ 1,150 ಪ್ರಕರಣಗಳನ್ನು ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಈ ಬಾರಿ ಅದಾಲತ್‌ಗೆ 5,325 ಪ್ರಕರಣಗಳು ದಾಖಲಾಗಿವೆ. ಕಳೆದ ಬಾರಿಗಿಂತ ಹೆಚ್ಚು ಸಂಖ್ಯೆಯ ಪ್ರಕರಣಗಳನ್ನು ಈ ಬಾರಿಯ ವಿಲೇವಾರಿಗೊಳಿಸುವ ಗುರಿ ಹೊಂದಲಾಗಿದೆ.
ಮಾಹಿತಿಗೆ ಸಂಪರ್ಕಿಸಿ
ಜು.13ರ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರು ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ, ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು. ನಿಯಾಮನುಸಾರ ಅದಾಲತ್‌ನಲ್ಲಿ ಭಾಗವಹಿಸಬಹುದು.