ಜಿಲ್ಲೆ

ಆ.26ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

ಮಂಗಳೂರು: ಬಿಇಡಬ್ಯುಎಸ್,  ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಮತ್ತು ಯುಎನ್‌ಡಿಪಿ-ಎಸ್‌ಎಪಿ ಪ್ರೊಜೆಕ್ಟ್ ಕೋಡನ್ ಉನ್ನತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆ.26ರಂದು ಬೆಳಗ್ಗೆ 9.30ರಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮೇಳದಲ್ಲಿ ಸುಮಾರು 50 ಕಂಪೆನಿಗಳು ಬಾಗವಹಿಸಲಿದ್ದು, 500ಕ್ಕೂ ಅಧಿಕ ಹುದ್ದೆಗಳಿಗೆ ಅರ್ಹರ ನೇಮಕಾತಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಆಶಾಲತಾ ಸುವರ್ಣ ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಮೇಳದ ಪ್ರಯೋಜನ ಪಡೆದುಕೊಳ್ಳಬಹುದು. ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಬಯೋಡಾಟಾ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಎಸೆಸ್ಸೆಲ್ಸಿ ಅಂಕಪಟ್ಟಿಯ ಜೊತೆಗೆ ಗರಿಷ್ಠ ಅರ್ಹತೆಯ ಅಂಕಪಟ್ಟಿಗಳನ್ನು ತರಬೇಕು. ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವವರು ಕೂಡ ಸಂದರ್ಶನಕ್ಕೆ ಹಾಜರಾಗಬಹುದು. ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆದಿತ್ಯಾ ಬಿರ್ಲಾ ಗ್ರೂಪ್, ವಿನ್ ಮ್ಯಾನ್ ಸ್‌ಟಾವೇರ್, ಭಾರತ್ ಆಟೋ ಕಾರ್ಸ್, ಮಾಂಡೋವಿ ಮೋಟರ್ರ್ಸ್‌ ಸಹಿತ 500ಕ್ಕೂ ಅಧಿಕ ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ವಿವರಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ ವಹಿಸುವರು. ಅತಿಥಿಗಳಾಗಿ ಕಾಲೇಜಿನ ಸಂಚಾಲಕ ವಸಂತ ಕಾರಂದೂರು, ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿರುವರು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಇಡಬ್ಯುಎಸ್ ಅಧ್ಯಕ್ಷ ಅಶೋಕ್ ಕುಮಾರ್, ಯುವವಾಹಿನಿ ಕೇಂದ್ರ ಉಪಸಮಿತಿಯ ಉಪಾಧ್ಯಕ್ಷ ಹರೀಶ್ ಕುಮಾರ್, ಪ್ಲೇಸ್‌ಮೆಂಟ್ ಆಫೀಸರ್ ಮಿಥುನ್ ಚಂದ್ರ ಉಪಸ್ಥಿತರಿದ್ದರು.