ಮದ್ದೂರು: ರಸಗೊಬ್ಬರ ಮಾರಾಟದಲ್ಲಿ ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರಿಕೆ ವಹಿಸಿ ಎಂದು ಮಂಡ್ಯ ಉಪ ವಿಭಾಗದ ಕೃಷಿ ನಿರ್ದೇಶಕಿ ಕೆ.ಮಾಲತಿ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕ ಮಾರಾಟಗಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಸಗೊಬ್ಬರವನ್ನು ಪಿಒಎಸ್ ಮೆಷಿನ್ ಮೂಲಕವೇ ಮಾರಾಟ ಮಾಡಿ ರೈತರಿಗೆ ರಶೀದಿ ನೀಡಬೇಕು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ರೈತರು ಬಿರುಸಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಕೃಷಿ ಪರಿಕರಗಳ ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳಿಗೆ ಯಾವುದೇ ಕೊರತೆ ಇಲ್ಲ. ಅಗತ್ಯ ವಸ್ತು ಕಾಯ್ದೆಯಡಿ ಪಾರದರ್ಶಕ ಹಾಗೂ ಸಮರ್ಪಕವಾಗಿ ಮಾರಾಟ ಮಾಡಬೇಕು. ಇಲಾಖೆಗೆ ವಹಿವಾಟಿನ ವರದಿಯನ್ನು ಕಾಲಕಾಲಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.
ಮದ್ದೂರು ತಾಲೂಕು ಕೃಷಿ ನಿರ್ದೇಶಕ ಡಿ.ಪರಮೇಶ ಮಾತನಾಡಿ, ರೈತರಿಗೆ ನಿಗದಿತ ನಮೂನೆಯಲ್ಲಿ ರಶೀದಿ ನೀಡಿ ಕೃಷಿ ಪರಿಕರ ಮಾರಾಟ ಮಾಡಬೇಕು. ಬೀಜೋಪಚಾರಕ್ಕೆ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ ಬೀಜ-ಕೀಟನಾಶಕ ಖರೀದಿಸಿದ ಪ್ರತಿ ರೈತರಿಗೆ ಉಚಿತವಾಗಿ ತಾಂತ್ರಿಕ ಮಾಹಿತಿ ಮತ್ತು ಸುರಕ್ಷಿತ ಸಿಂಪರಣಾ ಸಲಕರಣೆಗಳನ್ನು ನೀಡಬೇಕು ಎಂದರು.
ಕೃಷಿ ಅಧಿಕಾರಿಗಳಾದ ಗಿರೀಶ್‌ಗೌಡ, ದಯಾನಂದ್, ಭವಾನಿ, ರೂಪಶ್ರೀ, ಕೃಷ್ಣೇಗೌಡ, ಕರುಣ, ಕೆಂಪೇಗೌಡ, ಕೆಎಸ್‌ಸಿಎಂಎಫ್‌ನ ವ್ಯವಸ್ಥಾಪಕಿ ಶೈಲಜಾ, ಇಪ್ಕೊ ಸಂಸ್ಥೆಯ ಡ್ರೋಣ್ ತಂತ್ರಜ್ಞ ಧನರಾಜ ಇತರರಿದ್ದರು.